Bengaluru Rains: ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ

Bengaluru Rains: ಬೆಂಗಳೂರಿನಲ್ಲಿ ಸಂಜೆ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ರಾಜ್ಯದ ಏಳು ಜಿಲ್ಲೆಗಳಿಗೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಮಳೆ ಅಬ್ಬರ: ರಸ್ತೆಗಳು ಜಲಾವೃತ

Bengaluru Rains: ಬೆಂಗಳೂರು ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಮಳೆ ಬಿರುಸುಗೊಂಡಿದ್ದು, ಪ್ರಮುಖ ಬಡಾವಣೆಗಳಲ್ಲಿ ಧಾರಾಕಾರ ಮಳೆ (Heavy Rain) ಸುರಿದಿದೆ. ಮೆಜೆಸ್ಟಿಕ್, ಕಾರ್ಪೊರೇಷನ್, ಯಶವಂತಪುರ, ಮೈಸೂರು ಬ್ಯಾಂಕ್ ಸರ್ಕಲ್, ಮಲ್ಲೇಶ್ವರಂ ಮತ್ತು ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಂಡುಬಂದಿದೆ.

ಏಕಾಏಕಿ ಸುರಿದ ಮಳೆಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದ್ದಾರೆ. ಬಸ್ ಹಾಗೂ ರೈಲು ಹಿಡಿಯಲು ಬಂದವರು ಮತ್ತು ವಾಹನ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಕಷ್ಟಪಟ್ಟಿದ್ದಾರೆ. ಮಳೆ ಮುಂದುವರಿದರೆ ಸಂಚಾರದ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.

ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಕಿತ್ತಾಗನಹಳ್ಳಿ ಕ್ರಾಸ್ ಬಳಿ ಭಾರೀ ಮಳೆಯಿಂದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಳೆದ ಒಂದು ಗಂಟೆಯಿಂದ ಸುರಿದ ಮಳೆಗೆ ಚಂದಾಪುರ–ಹೊಸೂರು ಸಂಪರ್ಕ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ಹೆದ್ದಾರಿ ಕೆರೆಯಂತಾಗಿದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಎದುರಿಸಿದ್ದಾರೆ.

ಇದನ್ನೂ ಓದಿ: 4 ದಿನ ಭಾರೀ ಮಳೆ; ಬೆಂಗಳೂರು, ಮೈಸೂರು ಸೇರಿ ಅ.19ರವರೆಗೆ ಗುಡುಗು, ಮಿಂಚು ಸಹಿತ ಮಳೆ

Bengaluru Rains

ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಹವಾಮಾನ ಇಲಾಖೆ (India Meteorological Department) ನೀಡಿರುವ ಮುನ್ಸೂಚನೆಯ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದಲ್ಲದೆ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಮಳೆಯ ಸಂದರ್ಭದಲ್ಲಿ ವಾಹನ ಸವಾರರು ಜಲಾವೃತ ರಸ್ತೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನೀರು ತುಂಬಿರುವ ರಸ್ತೆಗಳ ಮೂಲಕ ಸಂಚರಿಸುವುದನ್ನು ತಪ್ಪಿಸಿ, ಹವಾಮಾನ ಇಲಾಖೆಯ ಮುಂದಿನ ಮುನ್ಸೂಚನೆಗಳನ್ನು ಗಮನಿಸುವುದು ಸೂಕ್ತ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories