ಬೆಂಗಳೂರು: ಸ್ನಾನದ ಕೋಣೆಯಲ್ಲಿ ಮೊಬೈಲ್ ಇಟ್ಟು ಮಹಿಳೆಯ ಚಿತ್ರೀಕರಣಕ್ಕೆ ಯತ್ನಿಸಿದ ಕಿಡಿಗೇಡಿ
ಬೆಂಗಳೂರಿನ ಕೋರಮಂಗಲದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 29 ವರ್ಷದ ಮಹಿಳಾ ಟೆಕಿಗೆ ಆತಂಕಕಾರಿ ಅನುಭವವಾಗಿದೆ. ಸ್ನಾನದ ಕೋಣೆಯ ಎಕ್ಸಾಸ್ಟ್ ಫ್ಯಾನ್‌ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಎಕ್ಸಾಸ್ಟ್ ಫ್ಯಾನ್‌ನಲ್ಲಿ ಮೊಬೈಲ್ ಪತ್ತೆ
- ಮಹಿಳೆಯಿಂದ ಕೋರಮಂಗಲ ಪೊಲೀಸರಿಗೆ ದೂರು
- ಆರೋಪಿ ಪತ್ತೆಗೆ ಪೊಲೀಸರಿಗೆ ಮಾಹಿತಿ
ಬೆಂಗಳೂರು (Bengaluru): ಮನೆಯೊಳಗೇ ಸ್ನಾನದ ಕೋಣೆಯಲ್ಲಿ ಅಳವಡಿಸಿದ್ದ ಎಕ್ಸಾಸ್ಟ್ ಫ್ಯಾನ್‌ನ ಎರಡು ಬ್ಲೇಡ್‌ಗಳ ನಡುವೆ ಮೊಬೈಲ್ ಫೋನ್ (Mobile Phone) ಇಟ್ಟಿರುವುದು ಪತ್ತೆಯಾಗಿದ್ದು, ಇದನ್ನು ಕಂಡ ಮಹಿಳೆ ಆತಂಕಗೊಂಡಿದ್ದಾರೆ.
29 ವರ್ಷದ ಮಹಿಳಾ ಟೆಕಿ ಕೋರಮಂಗಲದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನವೆಂಬರ್ 20ರಂದು ಬೆಳಗ್ಗೆ ಎಂದಿನಂತೆ ಜಿಮ್‌ಗೆ ತೆರಳಿದ್ದ ಅವರು, ಸುಮಾರು 9.40ರ ವೇಳೆಗೆ ಮನೆಗೆ ಮರಳಿದ್ದರು. ಬಳಿಕ ಸ್ನಾನಕ್ಕೆ ಸಿದ್ಧತೆ ಮಾಡಿಕೊಳ್ಳಲು ಗೀಸರ್ (Geyser) ಆನ್ ಮಾಡಿದ್ದಾರೆ.
ಸುಮಾರು 20 ನಿಮಿಷಗಳ ನಂತರ ಗೀಸರ್ ಸ್ವಿಚ್ ಆಫ್ ಮಾಡಿ ಸ್ನಾನ ಮಾಡಲು ಕೋಣೆಗೆ ತೆರಳಿದಾಗ ಅವರಿಗೆ ಅನಿರೀಕ್ಷಿತವಾಗಿ ಮೊಬೈಲ್ ಫೋನ್ ಕಾಣಿಸಿಕೊಂಡಿದೆ. ಎಕ್ಸಾಸ್ಟ್ ಫ್ಯಾನ್‌ನ ಎರಡು ಬ್ಲೇಡ್‌ಗಳ ನಡುವೆ ಫೋನ್ ಇರಿಸಿರುವುದನ್ನು ಗಮನಿಸಿದ ಮಹಿಳೆ ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಜೋರಾಗಿ ಕೂಗಿಕೊಂಡ ಅವರು, ಬಟ್ಟೆ ಧರಿಸಿದ ಬಳಿಕ ಮನೆಯ ಮೇಲಿನ ಮಹಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಯಾರೂ ಕಾಣಿಸಿಲ್ಲ. ಸ್ನಾನದ ಕೋಣೆಯಲ್ಲಿ ಮೊಬೈಲ್ ಇಟ್ಟಿದ್ದ ವ್ಯಕ್ತಿ ಯಾರು ಎಂಬುದು ಅವರಿಗೆ ತಿಳಿದುಬಂದಿಲ್ಲ.
ಘಟನೆಯಿಂದ ಆತಂಕಗೊಂಡ ಮಹಿಳೆ ತಡಮಾಡದೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ತಮ್ಮ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸುವ ಉದ್ದೇಶದಿಂದ ಯಾರೋ ಮೊಬೈಲ್ ಇರಿಸಿರುವ ಶಂಕೆ ವ್ಯಕ್ತಪಡಿಸಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಮನೆಯ ಸ್ನಾನದ ಕೋಣೆಯೊಳಗೆ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲೂ ಆತಂಕ ಮೂಡಿಸಿದೆ. ಮಹಿಳೆಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಲು ಯತ್ನಿಸಿದ ವ್ಯಕ್ತಿಯನ್ನು ಪತ್ತೆಹಚ್ಚುವುದು ಈಗ ಪೊಲೀಸರ ಮುಂದಿರುವ ಸವಾಲಾಗಿದೆ.




