ಬೆಂಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಹಿಟ್ ಅಂಡ್ ರನ್ ಆರೋಪ
ಬೆಂಗಳೂರಿನ ಜಯಮಹಲ್ ಮೊದಲನೇ ಕ್ರಾಸ್‌ನಲ್ಲಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ ಬಳಿಕ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಬೈಕ್ ಎಳೆಯಲ್ಪಟ್ಟು ಪೆಟ್ರೋಲ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರಿನ ಜಯಮಹಲ್ ಮೊದಲನೇ ಕ್ರಾಸ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಅಪಘಾತ ಆತಂಕ ಮೂಡಿಸಿದೆ. ಇನೋವಾ ಕಾರು ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ವಾಹನ ನಿಲ್ಲಿಸದೇ ಮುಂದಕ್ಕೆ ಚಲಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂದರ್ಭ ಬೈಕ್ ಕಾರಿನ ಸೈಡ್‌ಗೆ ಸಿಲುಕಿಕೊಂಡು ಕೆಲ ದೂರ ಎಳೆಯಲ್ಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅಪಘಾತದ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಸಹಾಯ ಮಾಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಪೆಟ್ರೋಲ್ ಸೋರಿಕೆ – ಬೈಕ್‌ಗೆ ಬೆಂಕಿ
ಅಪಘಾತದ ಬಳಿಕ ಬೈಕ್ ಎಳೆಯಲ್ಪಟ್ಟ ಪರಿಣಾಮದಿಂದ ಪೆಟ್ರೋಲ್ ಟ್ಯಾಂಕ್ ಹಾನಿಯಾಗಿದ್ದು, ಪೆಟ್ರೋಲ್ ಸೋರಿಕೆಯಾಗಿದೆ. ಇದರಿಂದ ಕೆಲವೇ ಕ್ಷಣಗಳಲ್ಲಿ ಬೈಕ್‌ಗೆ ಬೆಂಕಿ ಹೊತ್ತಿಕೊಂಡು, ನೋಡುತ್ತಿದ್ದವರ ಕಣ್ಣೆದುರೇ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಹೋಗಿದೆ.
ಘಟನೆ ನಡೆದ ಸ್ಥಳದಲ್ಲಿ ಕ್ಷಣಾರ್ಧದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ ಬೈಕ್‌ಗೆ ತಗುಲಿದ ಬೆಂಕಿ ವೇಗವಾಗಿ ಹರಡಿದ ಕಾರಣ ವಾಹನವನ್ನು ಉಳಿಸಲು ಸಾಧ್ಯವಾಗಲಿಲ್ಲ.
ಸಿಸಿಟಿವಿ ಕಾರ್ಯನಿರ್ವಹಿಸದಿರುವುದಕ್ಕೆ ಅಸಮಾಧಾನ
ಸ್ಥಳೀಯ ನಿವಾಸಿ ಗೌರಿ ನೀಡಿದ ಮಾಹಿತಿಯ ಪ್ರಕಾರ, ಇನೋವಾ ಕ್ರಿಸ್ಟಾ ಕಾರು ಮೊದಲು ಬೈಕ್‌ಗೆ ಟಚ್ ಆಗಿ ಡಿಕ್ಕಿ ಹೊಡೆದಿತ್ತು. ಆದರೆ ಚಾಲಕ ವಾಹನವನ್ನು ನಿಲ್ಲಿಸದೇ ಮುಂದೆ ಸಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಬೈಕ್ ಕಾರಿಗೆ ಸಿಲುಕಿಕೊಂಡು ಎಳೆಯಲ್ಪಟ್ಟಿದ್ದು, ಅದರಿಂದಲೇ ಪೆಟ್ರೋಲ್ ಲೀಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ.
ಘಟನೆ ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಪ್ರದೇಶದಲ್ಲಿದ್ದ ಕೆಲವು ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.



