ಬೆಂಗಳೂರು to ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಟಿಷ್ಯೂ ಪೇಪರ್ ಮೇಲೆ ಬರೆದ ಬಾಂಬ್ ಸಂದೇಶ ಆತಂಕ ಮೂಡಿಸಿತು. 183 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ಪರಿಶೀಲಿಸಿದ ಬಳಿಕ ಹುಸಿ ಬೆದರಿಕೆ ಎಂದು ದೃಢಪಟ್ಟಿದೆ.

ಬೆಂಗಳೂರು (Bengaluru): ಬೆಂಗಳೂರು ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಭಾನುವಾರ ಬೆಳಿಗ್ಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ ಕೆಲಕಾಲ ಆತಂಕ ಮೂಡಿಸಿತು.
ವಿಮಾನದ ಶೌಚಾಲಯದಲ್ಲಿ ಪತ್ತೆಯಾದ ಟಿಷ್ಯೂ ಪೇಪರ್ ಮೇಲೆ “ಬಾಂಬ್ ಇದೆ” ಎಂದು ಬರೆಯಲಾಗಿದ್ದ ಸಂದೇಶ ಸಿಬ್ಬಂದಿ ಹಾಗೂ ಪ್ರಯಾಣಿಕರಲ್ಲಿ ಗಾಬರಿಯನ್ನುಂಟುಮಾಡಿತು.
ಈ ವಿಷಯ ತಿಳಿಯುತ್ತಿದ್ದಂತೆಯೇ ವಿಮಾನದ ಪೈಲಟ್ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದರು. ಸುರಕ್ಷತಾ ಕ್ರಮವಾಗಿ ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದರು.
ಸಂಪೂರ್ಣ ತಪಾಸಣೆ ಬಳಿಕ ನಿಟ್ಟುಸಿರು
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರಿಯ ದಳವು ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿತು. ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಕಂಡುಬಂದರೂ, ಪರಿಶೀಲನೆಯ ಬಳಿಕ ಯಾವುದೇ ಸ್ಫೋಟಕ ವಸ್ತು ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ.
ಇದರಿಂದಾಗಿ ಈ ಪ್ರಕರಣವು ಹುಸಿ ಬಾಂಬ್ ಬೆದರಿಕೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಎಲ್ಲಾ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ವಿಮಾನವನ್ನು ಮರು ಪ್ರಯಾಣಕ್ಕೆ ಅನುಮತಿಸಿ ದೆಹಲಿಗೆ ಕಳುಹಿಸಲಾಯಿತು.
ಕಿಡಿಗೇಡಿಯನ್ನು ಪತ್ತೆಹಚ್ಚಲು ತನಿಖೆ
ಟಿಷ್ಯೂ ಪೇಪರ್ ಮೇಲೆ ಬಾಂಬ್ ಬೆದರಿಕೆ ಸಂದೇಶವನ್ನು ಬರೆದಿರುವ ವ್ಯಕ್ತಿ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪೊಲೀಸರು ಹಾಗೂ ಭದ್ರತಾ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲ ಉಂಟಾದರೂ, ಅಧಿಕಾರಿಗಳ ತ್ವರಿತ ಕ್ರಮದಿಂದ ದೊಡ್ಡ ಆತಂಕ ತಪ್ಪಿದಂತಾಗಿದೆ.



