ಬೆಂಗಳೂರಿನಲ್ಲಿ ಸರಣಿ ಚೋರಿ! ಜೈಲಲ್ಲಿ ಹುಟ್ಟಿದ ಸ್ನೇಹ, ಹೊರಬಂದು ಕಳ್ಳತನ: ಪೊಲೀಸರ ಬಲೆಗೆ

ಜೈಲಿನಲ್ಲಿ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡ ಮೂವರು ಆರೋಪಿಗಳು ಬಿಡುಗಡೆಯಾದ ಬಳಿಕ ನಗರದಲ್ಲಿ ಸರಣಿ ಚೋರಿಗೆ ಇಳಿದಿದ್ದು, ವಿವಿಧ ಠಾಣಾ ಪೊಲೀಸರು ಬಂಧಿಸಿ ಭಾರೀ ಪ್ರಮಾಣದ ಚಿನ್ನ ವಶಪಡಿಸಿಕೊಂಡಿದ್ದಾರೆ.

  • ಜೈಲು ಸ್ನೇಹ, ಸರಣಿ ಚೋರಿ ನಡೆಸಿದ ಮೂವರ ಬಂಧನ
  • ₹38.17 ಲಕ್ಷ ಮೌಲ್ಯದ ಚಿನ್ನಾಭರಣ ವಶ
  • ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ

ಬೆಂಗಳೂರು (Bengaluru): ಜೈಲಿನಲ್ಲಿ ಪರಿಚಯವಾಗಿ ಸ್ನೇಹಿತರಾದ ಆರೋಪಿಗಳು, ಜೈಲಿನಿಂದ ಹೊರಬಂದ ಬಳಿಕ ನಗರದಲ್ಲಿ ಸರಣಿ ಚೋರಿಗಳಿಗೆ ಕೈ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾರಣ್ಯಪುರ ಪೊಲೀಸರು ಈ ಗ್ಯಾಂಗ್‌ನ್ನು ಬಂಧಿಸಿದ್ದು, ಅವರಿಂದ ದೊಡ್ಡ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ತಿಲಕ್‌ನಗರ ನಿವಾಸಿ ಬಾಲರಾಜು (45), ಆಡುಗೋಡಿ ಮೂಲದ ಗೌರವ್ (23) ಹಾಗೂ ಪ್ರವೀಣ್ (26) ಎಂದು ಗುರುತಿಸಲಾಗಿದೆ.

ಹಳೆಯ ಪ್ರಕರಣದಲ್ಲಿ ಜೈಲಿನಲ್ಲಿದ್ದ ಬಾಲರಾಜುವಿಗೆ ಗೌರವ್ ಹಾಗೂ ಪ್ರವೀಣ್ ಪರಿಚಯವಾಗಿದ್ದು, ಅಲ್ಲಿಂದಲೇ ಸ್ನೇಹ ಬೆಳೆದಿತ್ತು. ಜೈಲಿನಿಂದ ಬಿಡುಗಡೆಗೊಂಡ ನಂತರ ಮೂವರೂ ಸೇರಿ ಮನೆ ಕಳ್ಳತನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.

ಭೈರಸಂದ್ರದಲ್ಲಿ ನಡೆದ ಚೋರಿ ಪ್ರಕರಣದ ತನಿಖೆ ವೇಳೆ ಈ ಗ್ಯಾಂಗ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಆರೋಪಿಗಳಿಂದ 257 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು ₹38.17 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಳ! ಕಳ್ಳರ ಪತ್ತೆಗೆ ಶೋಧ ಕಾರ್ಯ

ಬೆಂಗಳೂರಿನ ಮತ್ತೊಂದು ಪ್ರಕರಣ

ಇದರ ನಡುವೆ, ಮತ್ತೊಂದು ಪ್ರಕರಣದಲ್ಲಿ ಜೆಪಿ ನಗರ ಪೊಲೀಸರು ಅಂತರರಾಜ್ಯ ಮಟ್ಟದ ಕಳ್ಳನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮೆಹಬೂಬ್ ಖಾನ್ ಪಠಾನ್ ಎಂಬಾತನು ಮನೆಗಳಲ್ಲಿ ಕಳ್ಳತನ ಮಾಡಿದ ಚಿನ್ನವನ್ನು ಕರಗಿಸಿ ಮಾರಾಟ ಮಾಡುತ್ತಿದ್ದನು ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ.

ಆರೋಪಿಯಿಂದ ₹4.60 ಲಕ್ಷ ನಗದು ಹಾಗೂ ₹65 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ನಾಗವಾರದಲ್ಲಿ ವಾಸವಿದ್ದ ಈತನ ವಿರುದ್ಧ ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸುಮಾರು 32 ಕ್ಕೂ ಹೆಚ್ಚು ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೆಪಿ ನಗರದಲ್ಲಿ ದಂಪತಿಗಳು ಮನೆ ಬೀಗದ ಕೀಲಿಯನ್ನು ಹೊರಗಿನ ಸ್ಟ್ಯಾಂಡ್‌ನ ಶೂವಿನಲ್ಲಿ ಇಟ್ಟು ಹೊರಗೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡು ಪಠಾನ್ ಮನೆಗೆ ನುಗ್ಗಿ ಚಿನ್ನ ದೋಚಿದ್ದಾನೆ. ತನಿಖೆಯ ಬಳಿಕ ಈತನ ಕೈಚಳಕ ನಗರದ ಹಲವು ಚೋರಿಗಳ ಹಿಂದಿದೆ ಎಂಬುದು ಪೊಲೀಸರಿಗೆ ದೃಢವಾಗಿದೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories