Bengaluru: ಬೆಂಗಳೂರು ಥಣಿಸಂದ್ರದಲ್ಲಿ ಮತ್ತೆ ಜೆಸಿಬಿ ಘರ್ಜನೆ; 60 ಅಕ್ರಮ ಮನೆಗಳ ತೆರವು
ಕೋಗಿಲು ಕ್ರಾಸ್ ನಂತರ ಇದೀಗ ಬೆಂಗಳೂರು ಥಣಿಸಂದ್ರದಲ್ಲಿ ಅಕ್ರಮ ಮನೆಗಳ ಮೇಲೆ ಜೆಸಿಬಿ ಕಾರ್ಯಾಚರಣೆ ನಡೆದಿದ್ದು, ಸುಮಾರು 60 ಮನೆಗಳು ತೆರವಾಗಿವೆ. ನೋಟಿಸ್ ಇಲ್ಲದೆ ತೆರವು ಆರೋಪಿಸಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಥಣಿಸಂದ್ರದಲ್ಲಿ ಬೆಳಗ್ಗೆಯಿಂದಲೇ ಅಕ್ರಮ ಮನೆಗಳ ತೆರವು
- ಬಿಡಿಎ ಜಾಗದಲ್ಲಿ ಮನೆ ನಿರ್ಮಾಣ ಆರೋಪ
- ನೋಟಿಸ್ ಇಲ್ಲದೆ ಕಾರ್ಯಾಚರಣೆ, ನಿವಾಸಿಗಳ ಆರೋಪ
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೋಗಿಲು ಕ್ರಾಸ್‌ನಲ್ಲಿ ನಡೆದ ಜೆಸಿಬಿ ತೆರವು ಕಾರ್ಯಾಚರಣೆ ಕುರಿತ ವಿವಾದ ತಣ್ಣಗಾಗುವ ಮುನ್ನವೇ, ಇದೀಗ ನಾಗವಾರ ಸಮೀಪದ ಥಣಿಸಂದ್ರ ಪ್ರದೇಶದಲ್ಲಿ (Thanisandra) ಮತ್ತೆ ಅಕ್ರಮ ಮನೆಗಳ ತೆರವು ನಡೆದಿದೆ.
ಬೆಳ್ಳಂಬೆಳಗ್ಗೆ 7 ಗಂಟೆಯಿಂದಲೇ ಅಶ್ವತ್ಥ್ ನಗರದಲ್ಲಿ ಜೆಸಿಬಿ ಯಂತ್ರಗಳು (Demolition Drive) ಕಾರ್ಯನಿರ್ವಹಿಸಿದ್ದು, ಸುಮಾರು ಎರಡು ಎಕರೆ ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಸುಮಾರು 60 ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜಾಗ ಸರ್ಕಾರಿ ಸ್ವಾಮ್ಯದಾಗಿದ್ದು, ಅನಧಿಕೃತ ನಿರ್ಮಾಣ ನಡೆದಿತ್ತು ಎಂಬುದು ಬಿಡಿಎ ವಾದವಾಗಿದೆ.
ಇದನ್ನೂ ಓದಿ: ಬೆಂಗಳೂರು ಜನರನ್ನು ಬೆಚ್ಚಿಬೀಳಿಸಿದ ಕ್ರೈಂ, ಮಗಳ ಪ್ರೇಮ ಕಥೆ ತಾಯಿಯ ಸಾವಿನಲ್ಲಿ ಅಂತ್ಯ
ನೋಟಿಸ್ ಇಲ್ಲದೆ ದಾಳಿ ಆರೋಪ
ಆದರೆ ಸ್ಥಳೀಯ ನಿವಾಸಿಗಳು ಈ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ನೆಚ್ಚರಿಕೆ, ನೋಟಿಸ್ ಅಥವಾ ಪರ್ಯಾಯ ವ್ಯವಸ್ಥೆಯ ಮಾಹಿತಿ ನೀಡದೆ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹಠಾತ್ ನಡೆದ ಕಾರ್ಯಾಚರಣೆಯಿಂದ ಹಲವು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ ಎಂಬ ಅಸಮಾಧಾನವೂ ಕೇಳಿಬಂದಿದೆ.
ಈ ನಡುವೆ, ಕಾನೂನು ಪ್ರಕಾರವೇ ಕಾರ್ಯಾಚರಣೆ ನಡೆಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ಆಡಳಿತದ ಕಟ್ಟುನಿಟ್ಟಿನ ಕ್ರಮ, ಮತ್ತೊಂದೆಡೆ ನಿವಾಸಿಗಳ ಬದುಕಿನ ಆತಂಕ, ಈ ಎರಡರ ಮಧ್ಯೆ ಥಣಿಸಂದ್ರ ತೆರವು ಕಾರ್ಯಾಚರಣೆ ನಗರದಲ್ಲಿ ಮತ್ತೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ.



