ಸಾಲ ಕೊಡಿಸುವುದಾಗಿ ನಂಬಿಸಿ 46 ಲಕ್ಷದ ಚಿನ್ನದೊಂದಿಗೆ ಜ್ಯುವೆಲ್ಲರಿ ಮಾಲಿಕ ಎಸ್ಕೇಪ್
ಕಡಿಮೆ ಬಡ್ಡಿದರದಲ್ಲಿ ಚಿನ್ನದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ 46 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ಜ್ಯುವೆಲ್ಲರಿ ಅಂಗಡಿ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಕಡಿಮೆ ಬಡ್ಡಿಗೆ ಚಿನ್ನದ ಸಾಲ (Gold Loan) ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಪೊಲೀಸರು ಜ್ಯುವೆಲ್ಲರಿ ಅಂಗಡಿ ಮಾಲಿಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತನನ್ನು ಕೊಡಿಗೇಹಳ್ಳಿಯ ನಿವಾಸಿ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಅಲ್ಲಾಳಸಂದ್ರ ಜಿಕೆವಿಕೆ ನಗರದಲ್ಲಿ ವಾಸವಿರುವ ಸುವರ್ಣಲತಾ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸುವರ್ಣಲತಾ ಸ್ಪಾ ಹಾಗೂ ಸಲೂನ್ ವ್ಯವಹಾರ ನಡೆಸುತ್ತಿದ್ದು, ವೈಯಕ್ತಿಕ ಕಾರಣಕ್ಕಾಗಿ ವಿವಿಧ ಹಣಕಾಸು ಸಂಸ್ಥೆಗಳು ಹಾಗೂ ಜ್ಯುವೆಲ್ಲರಿ ಅಂಗಡಿಗಳಲ್ಲಿ ತಮ್ಮ ಚಿನ್ನಾಭರಣಗಳನ್ನು ಅಡಮಾನ ಇಟ್ಟಿದ್ದರು.
ಈ ವೇಳೆ ಸ್ನೇಹಿತರ ಮೂಲಕ ಪರಿಚಯವಾದ ನರಸಿಂಹಮೂರ್ತಿ, ತನ್ನ ಪರಿಚಯದ ಸಹಕಾರ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ ಎನ್ನಲಾಗಿದೆ.
ಹೆಚ್ಚಿನ ಬಡ್ಡಿ ತೊಂದರೆಯಿಂದ ಬೇಸತ್ತಿದ್ದ ಮಹಿಳೆ ಬೇರೆಡೆ ಅಡಮಾನ ಇಟ್ಟಿದ್ದ ಸುಮಾರು 46 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬಿಡಿಸಿ ಆರೋಪಿಗೆ ನೀಡಿದ್ದಾರೆ.
ನಂತರ ಆರೋಪಿ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಹಣಕ್ಕಾಗಿ ಚೆಕ್ ನೀಡಿದ್ದಾನೆ. ಆದರೆ ಆ ಬ್ಯಾಂಕ್ ಖಾತೆ ಜಪ್ತಿ ಆಗಿದೆ, ಎರಡು-ಮೂರು ದಿನ ಕಾಯಬೇಕು ಎಂದು ಹೇಳಿ ಸಮಯ ಕಳೆಯುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಬಳಿಕ ಚಿನ್ನಾಭರಣವನ್ನು ಮರಳಿ ನೀಡದೇ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಮಹಿಳೆಯ ದೂರು ದಾಖಲಿಸಿಕೊಂಡ ಕೊಡಿಗೇಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ವಂಚನೆಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.



