ಬೆಂಗಳೂರು ಜನರೇ ಎಚ್ಚರ! ಕಲುಷಿತ ನೀರಿನ ಕಾಯಿಲೆಗಳಲ್ಲಿ ಕರ್ನಾಟಕ ಮುಂಚೂಣಿ
ಕಲುಷಿತ ನೀರಿನಿಂದ ಹರಡುವ ಟೈಫಾಯ್ಡ್ ಹಾಗೂ ಅತಿಸಾರ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿ ಇರುವ ಆತಂಕಕಾರಿ ಅಂಶ ಬಹಿರಂಗವಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರಕರಣಗಳ ಏರಿಕೆ ಆರೋಗ್ಯ ಇಲಾಖೆಗೆ ಸವಾಲಾಗಿದೆ.

- ಕಲುಷಿತ ನೀರಿನ ಕಾಯಿಲೆಗಳಲ್ಲಿ ಕರ್ನಾಟಕ ನಂಬರ್ 1
- ಬೆಂಗಳೂರು ಟೈಫಾಯ್ಡ್ ಮತ್ತು ಅತಿಸಾರ ಪ್ರಕರಣಗಳ ಹೆಚ್ಚಳ
- ಟ್ಯಾಂಕರ್ ನೀರು, ಡ್ರೈನೇಜ್ ಮಿಶ್ರಿತ ನೀರೇ ಪ್ರಮುಖ ಕಾರಣ
ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಪ್ರಕಾರ, ಟೈಫಾಯ್ಡ್ ಹಾಗೂ ಅತಿಸಾರ ಪ್ರಕರಣಗಳಲ್ಲಿ ಕರ್ನಾಟಕ ಉನ್ನತ ಸ್ಥಾನದಲ್ಲಿದೆ. ಹಳ್ಳಿಗಳಿಗಿಂತಲೂ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಗಮನಾರ್ಹವಾಗಿದೆ.
2022ರಿಂದ 2025ರವರೆಗೆ ಅತಿಸಾರ ಮತ್ತು ಟೈಫಾಯ್ಡ್ ಪ್ರಕರಣಗಳು ಲಕ್ಷಾಂತರದಲ್ಲಿ ದಾಖಲಾಗಿವೆ. 2025ರಲ್ಲಿ ಮಾತ್ರ ಅತಿಸಾರ ಸುಮಾರು 1.8 ಲಕ್ಷ ಪ್ರಕರಣಗಳು ಹಾಗೂ ಟೈಫಾಯ್ಡ್ 39 ಸಾವಿರಕ್ಕೂ ಹೆಚ್ಚು ವರದಿಯಾಗಿವೆ. ಹಿಂದಿನ ವರ್ಷಗಳಲ್ಲೂ ಇದೇ ರೀತಿಯ ಪ್ರಮಾಣ ಕಂಡುಬಂದಿದೆ.
ಕಾರಣಗಳೇನು?
ನಗರ ಪ್ರದೇಶಗಳಲ್ಲಿ ಟ್ಯಾಂಕರ್ ನೀರು, ಪೈಪ್‌ಲೈನ್‌ಗಳಲ್ಲಿ ಉಂಟಾಗುವ ಸೋರಿಕೆ, ಒಳಚರಂಡಿ ಮಿಶ್ರಿತ ನೀರು ಮತ್ತು ಗುಣಮಟ್ಟವಿಲ್ಲದ ಪ್ಯಾಕೇಜ್ಡ್ ವಾಟರ್ ಸಮಸ್ಯೆಗೆ ಮೂಲ ಕಾರಣವೆಂದು ಹೇಳಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾದಂತೆ, ಕಲುಷಿತ ನೀರಿನ ಬಳಕೆ ಹೆಚ್ಚಾಗಿ ಸೋಂಕು ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ.
ಅಕ್ಯೂಟ್ ಡಯಾರಿಯಲ್ ಡಿಸೀಸ್ ಲಕ್ಷಣಗಳಾಗಿ ಭೇದಿ, ವಾಂತಿ, ಹೊಟ್ಟೆನೋವು, ಕಿಬ್ಬೊಟ್ಟೆ ಸೆಳೆತ ಮತ್ತು ಜ್ವರ ಕಾಣಿಸಿಕೊಳ್ಳುತ್ತವೆ. ಮಕ್ಕಳು ಹಾಗೂ ಹಿರಿಯರು ಹೆಚ್ಚು ಬಾಧಿತರಾಗುತ್ತಿದ್ದಾರೆ. ಪ್ರತಿದಿನವೂ ಕನಿಷ್ಠ ಹತ್ತು ಪ್ರಕರಣಗಳು ವರದಿಯಾಗುತ್ತಿರುವ ಮಾಹಿತಿ ವೈದ್ಯಕೀಯ ವಲಯದಿಂದ ಲಭ್ಯವಾಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆ
ವೈದ್ಯರು ಸ್ವಚ್ಛ ನೀರು ಕುಡಿಯುವಂತೆ, ನೀರನ್ನು ಕುದಿಸಿ ಬಳಸುವಂತೆ ಹಾಗೂ ಮಕ್ಕಳಲ್ಲಿ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ನಗರ ಪ್ರದೇಶಗಳಲ್ಲಿ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



