ಬೆಂಗಳೂರು ಆನೇಕಲ್ ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ; ತಮಿಳುನಾಡಿನಲ್ಲಿ ಶವ ಪತ್ತೆ
ಬೆಂಗಳೂರು ಆನೇಕಲ್ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಶವ ತಮಿಳುನಾಡಿನ ಡೆಂಕಣಿಕೋಟೆ ಬಳಿ ಪತ್ತೆಯಾಗಿದೆ. 25 ಲಕ್ಷ ರೂಪಾಯಿ ಸುಪಾರಿ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರು ನಗರ ಹೊರವಲಯದ ಆನೇಕಲ್ನಲ್ಲಿ ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರ ಶವ ತಮಿಳುನಾಡಿನ ಡೆಂಕಣಿಕೋಟೆ ಸಮೀಪ ಪತ್ತೆಯಾಗಿದ್ದು, ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿದೆ. ನಿನ್ನೆ ಸಂಜೆ ದುಷ್ಕರ್ಮಿಗಳು ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿ ಕರೆದೊಯ್ದಿದ್ದರು. ನಂತರ ಅವರನ್ನು ಬೇರೆಡೆಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಡೆಂಕಣಿಕೋಟೆ ಭಾಗದಲ್ಲಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ತಿಳಿದ ಕುಟುಂಬಸ್ಥರು ದುಃಖ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
25 ಲಕ್ಷ ಸುಪಾರಿ ಆರೋಪ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಬಾಬು ಎಂಬ ವ್ಯಕ್ತಿ ಸುಮಾರು 25 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುಪಾರಿ ಪಡೆದುಕೊಂಡ ದುಷ್ಕರ್ಮಿಗಳು ಗೋಪಾಲ್ ಅವರನ್ನು ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಈ ಕೋನದಲ್ಲಿಯೂ ತನಿಖೆ ಮುಂದುವರೆಸಿದ್ದು, ಪ್ರಕರಣದ ಹಿಂದೆ ಇರುವ ನಿಜವಾದ ಕಾರಣವನ್ನು ಪತ್ತೆಹಚ್ಚಲು ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸುತ್ತಿದ್ದಾರೆ.
ವಿಶೇಷ ತಂಡಗಳಿಂದ ಶೋಧ ಕಾರ್ಯಾಚರಣೆ
ಗೋಪಾಲ್ ರಿಯಲ್ ಎಸ್ಟೇಟ್ ವ್ಯವಹಾರಗಳ ಜೊತೆಗೆ ಹಣಕಾಸು ವ್ಯವಹಾರದಲ್ಲಿಯೂ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. ಕರ್ಪೂರು ಗೇಟ್ ಬಳಿ ಗೋಪಾಲ್ ಮತ್ತು ಸತೀಶ್ ಇದ್ದ ಕಾರಿಗೆ ದುಷ್ಕರ್ಮಿಗಳು ತಮ್ಮ ವಾಹನದಿಂದ ಡಿಕ್ಕಿ ಹೊಡೆದು, ಬಳಿಕ ಅವರನ್ನು ಬಲವಂತವಾಗಿ ಕರೆದೊಯ್ದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಜಿಗಣಿ ಪೊಲೀಸರು ಮೊಹನ್ ಬಾಬು, ಹರೀಶ್ ಮತ್ತು ಕಿರಣ್ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗೋಪಾಲ್ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ 7 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಶವ ಪತ್ತೆಯಾದ ಹಿನ್ನೆಲೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಕುಟುಂಬಸ್ಥರ ಪ್ರತಿಭಟನೆ
ಘಟನೆ ತಿಳಿದ ಕೂಡಲೇ ಗೋಪಾಲ್ ಕುಟುಂಬಸ್ಥರು ಹಾಗೂ ಬಂಧುಗಳು ಆನೇಕಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಿದ್ದಾರೆ.



