ಬೆಂಗಳೂರು ನಗರದಲ್ಲಿ ಕುಂದಾಪುರ ಕನ್ನಡ ಉತ್ಸವ 2026: ಸಂಸ್ಕೃತಿಯ ಸಂಭ್ರಮ ಸಡಗರ
ವಿಜಯನಗರದ ಬಿಜಿಎಸ್ ಮೈದಾನದಲ್ಲಿ ನಡೆದ ಕುಂದಾಪುರ ಕನ್ನಡ ಉತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು; ಯಕ್ಷಗಾನ, ಕರಾವಳಿ ಕಲೆ, ಮೀನುಗಳ ಪ್ರದರ್ಶನ ಮತ್ತು ಸಾಂಪ್ರದಾಯಿಕ ಆಟಗಳು ವಿಶೇಷ ಆಕರ್ಷಣೆಯಾದವು.

ಬೆಂಗಳೂರು (Bengaluru), ಆ.31: ಸಿಲಿಕಾನ್ ಸಿಟಿಯ ವಿಜಯನಗರದ ಬಿಜಿಎಸ್ ಮೈದಾನ ಭಾನುವಾರ ಒಂದು ದಿನ ಸಂಪೂರ್ಣವಾಗಿ ಕುಂದಾಪುರದ ಸೊಗಡಿನಲ್ಲಿ ಮಿಂದೆದ್ದಿತ್ತು. ‘ಟೀಮ್ ಕುಂದಾಪುರಿಯನ್ಸ್’ ಆಯೋಜಿಸಿದ್ದ ಕುಂದಾಪುರ ಕನ್ನಡ ಉತ್ಸವ 2026 (Kundapura Kannada Utsava) ಬೆಳಿಗ್ಗೆಯಿಂದ ರಾತ್ರಿ 9ರವರೆಗೆ ಅದ್ಧೂರಿಯಾಗಿ ನಡೆಯಿತು. ತಾಯ್ನಾಡಿನಿಂದ ದೂರವಿರುವ ಕುಂದಾಪುರಿಗರು ಮಾತ್ರವಲ್ಲದೆ, ಬೆಂಗಳೂರಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಕನ್ನಡ ಪ್ರೇಮಿಗಳೂ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಉತ್ಸವದ ಆರಂಭದಲ್ಲೇ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು. ಬಳಿಕ ನಡೆದ ನೃತ್ಯ ಕಾರ್ಯಕ್ರಮಗಳು, ‘ಡಿಜೆ ಕುಂದಾಪುರ’ ಹಾಗೂ ಕರಾವಳಿಯ ಪ್ರಸಿದ್ಧ ಯಕ್ಷಗಾನ (Yakshagana) ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈದಾನದಲ್ಲಿ ಎಲ್ಲೆಡೆ ಕುಂದಾಪುರ ಕನ್ನಡದ ಮಾತು, ಕರಾವಳಿಯ ಸಂಪ್ರದಾಯ ಮತ್ತು ಸ್ಥಳೀಯ ಕಲೆಯ ಸೊಗಡು ಕಾಣಿಸಿಕೊಂಡಿದ್ದು, ಬೆಂಗಳೂರಿನಲ್ಲೇ ಪುಟ್ಟ ಕುಂದಾಪುರ ನಿರ್ಮಾಣವಾದ ಅನುಭವ ಮೂಡಿಸಿತು.
ಅಪರೂಪದ ವಸ್ತು, ಮೀನುಗಳ ಪ್ರದರ್ಶನ
ಈ ಬಾರಿ ಉತ್ಸವದಲ್ಲಿ (Kundapura Kannada Utsava 2026) ಹಳೆಯ ಕಾಲದ ಅಪರೂಪದ ವಸ್ತುಗಳ ಪ್ರದರ್ಶನವೂ ಜನರನ್ನು ಸೆಳೆಯಿತು. ಕರಾವಳಿ ಭಾಗದಲ್ಲಿ ಕಂಡುಬರುವ ವಿವಿಧ ಬಗೆಯ ಮೀನುಗಳನ್ನು ಒಂದೇ ಸ್ಥಳದಲ್ಲಿ ನೋಡುವ ಅವಕಾಶ ಸಿಕ್ಕಿದ್ದರಿಂದ ಮಕ್ಕಳು ಸೇರಿದಂತೆ ಹಲವರು ಉತ್ಸಾಹದಿಂದ ಪ್ರದರ್ಶನ ವೀಕ್ಷಿಸಿದರು. ಗ್ರಾಮೀಣ ಬದುಕನ್ನು ನೆನಪಿಸುವ ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳು ಕೂಡ ಜನರ ಗಮನ ಸೆಳೆದವು.
ಭಾಷೆ ಮತ್ತು ಸಂಸ್ಕೃತಿಯ ಮುಂದಿನ ಪೀಳಿಗೆಯ ಬೆಳವಣಿಗೆ ಕುರಿತು ‘ಕುಂದಾಪುರ ಸಂವಾದ’ದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಿತು. ಇದೇ ವೇಳೆ ಕುಂದಾಪುರ ಭಾಗದ ವಿವಿಧ ಕ್ರಿಯೇಟರ್ಗಳು ಭಾಗವಹಿಸಿದ್ದ ‘ಯುವಸಂಗಮ’ ಕಾರ್ಯಕ್ರಮಕ್ಕೂ ಉತ್ತಮ ಸ್ಪಂದನೆ ದೊರೆಯಿತು. ಮನರಂಜನೆಯ ಜೊತೆಗೆ ಭಾಷೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಚರ್ಚೆಗೆ ವೇದಿಕೆ ಕಲ್ಪಿಸಿರುವುದು ಉತ್ಸವದ ವಿಶೇಷತೆಯಾಗಿತ್ತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಗಣ್ಯರು ಮತ್ತು ಸಿನಿಮಾ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು. ಕುಂದಾಪುರ ಕನ್ನಡ (Kundapura Kannada) ಭಾಷೆಯ ವೈಶಿಷ್ಟ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಅಗತ್ಯದ ಕುರಿತು ಅವರು ಮಾತನಾಡಿದರು. ಭಾಷೆ ಮತ್ತು ಸ್ಥಳೀಯ ಸಂಪ್ರದಾಯಗಳನ್ನು ಉಳಿಸುವಲ್ಲಿ ಯುವಜನರ ಪಾತ್ರವೂ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಉತ್ಸವವು ಕೇವಲ ಕುಂದಾಪುರದ ಜನರ ಕಾರ್ಯಕ್ರಮವಾಗಿ ಉಳಿಯದೆ, ವಿವಿಧ ಪ್ರದೇಶಗಳ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆತಂದಿತು. ಅನೇಕರು ಕರಾವಳಿಯ ಸಾಂಪ್ರದಾಯಿಕ ಆಹಾರಗಳನ್ನು ಸವಿದು, ಅಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಅನುಭವಿಸಿದರು. ಭಾಷೆಯ ಮೇಲಿನ ಅಭಿಮಾನವೇ ಸಾವಿರಾರು ಜನರನ್ನು ಕಾರ್ಯಕ್ರಮದತ್ತ ಸೆಳೆದ ಪ್ರಮುಖ ಕಾರಣವಾಗಿತ್ತು.
8ನೇ ವರ್ಷದ ಉತ್ಸವಕ್ಕೆ ಭರ್ಜರಿ ಯಶಸ್ಸು
ತಮ್ಮ ಹುಟ್ಟೂರಿನಿಂದ ದೂರವಿದ್ದರೂ ಕುಂದಾಪುರದ ಭಾಷೆ, ಕಲೆ ಮತ್ತು ಸಂಪ್ರದಾಯಗಳನ್ನು ಬೆಂಗಳೂರಿನಲ್ಲಿ ಜೀವಂತವಾಗಿಡುವ ‘ಟೀಮ್ ಕುಂದಾಪುರಿಯನ್ಸ್’ ಪ್ರಯತ್ನಕ್ಕೆ ಈ ವರ್ಷದ ಉತ್ಸವ ಮತ್ತಷ್ಟು ಬಲ ನೀಡಿದೆ. 8ನೇ ವರ್ಷದ ಈ ಕಾರ್ಯಕ್ರಮಕ್ಕೆ ದೊರೆತ ಜನಬೆಂಬಲ ಸಂಘಟಕರ ಉತ್ಸಾಹವನ್ನು ಹೆಚ್ಚಿಸಿದೆ.
ಮುಂದಿನ ವರ್ಷಗಳಲ್ಲಿ ಉತ್ಸವವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುವ ನಿರೀಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಕುಂದಾಪುರದ ನೆಲದ ಸೊಗಡನ್ನು ಬೆಂಗಳೂರಿನ ಹೃದಯಭಾಗಕ್ಕೆ ತಂದು ಸಾವಿರಾರು ಮಂದಿಗೆ ಪರಿಚಯಿಸಿದ ಈ ಉತ್ಸವ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿಗೆ ಉತ್ತಮ ವೇದಿಕೆಯಾಯಿತು.



