ಬೆಚ್ಚಿಬಿದ್ದ ಬೆಂಗಳೂರು ಜನ! ಮತ್ತೆ ಚಿರತೆ ಪ್ರತ್ಯಕ್ಷ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬನಶಂಕರಿ 5ನೇ ಹಂತದಲ್ಲಿ ಮುಂಜಾನೆ ಮನೆಯ ಮುಂದೆ ಒಂಟಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
- ಬನಶಂಕರಿ 5ನೇ ಹಂತದಲ್ಲಿ ಆತಂಕ
- ನಾಯಿಗಳ ಮೇಲೆ ದಾಳಿಗೆ ಯತ್ನಿಸಿದ ಚಿರತೆ
ಬೆಂಗಳೂರು (Bengaluru): ರಾಜಧಾನಿಯ ಜನನಿಬಿಡ ಪ್ರದೇಶಗಳಲ್ಲೂ ಚಿರತೆ ಓಡಾಟ ಮುಂದುವರಿದಿದ್ದು, ಬನಶಂಕರಿ (Banashankari) 5ನೇ ಹಂತದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಸೆಪ್ಟೆಂಬರ್ 10ರಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಮನೆಯೊಂದರ ಮುಂದೆ ಒಂಟಿ ಚಿರತೆ (Leopard) ಕಾಣಿಸಿಕೊಂಡಿದೆ.
ಬನಶಂಕರಿ 5ನೇ ಹಂತದ 2ನೇ ಬ್ಲಾಕ್ ಹಾಗೂ 6ನೇ ಹಂತದ ಸುತ್ತಮುತ್ತ ಚಿರತೆ ಓಡಾಡಿರುವುದು ಕಂಡುಬಂದಿದೆ. ಕೇಶವ್ (Keshav) ಎಂಬುವವರ ಮನೆಯ ಮುಂಭಾಗದಲ್ಲಿ ಚಿರತೆ ಕೆಲಕಾಲ ಓಡಾಡಿದ್ದು, ಅಲ್ಲಿದ್ದ ನಾಯಿಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ನಾಯಿಗಳು ಜೋರಾಗಿ ಬೊಗಳುತ್ತಿದ್ದಂತೆ ಬೆದರಿದ ಚಿರತೆ ಅಲ್ಲಿಂದ ವೇಗವಾಗಿ ತೆರಳಿದೆ.
ಬೆಳಗ್ಗೆ ಮನೆಗೆ ಬಂದ ಕೆಲಸಗಾರನಿಗೆ ಮನೆಯ ಮುಂಭಾಗದಲ್ಲಿ ಚಿರತೆಯ ಹೆಜ್ಜೆ ಗುರುತುಗಳು (Pugmarks) ಕಂಡಿವೆ. ಈ ಬಗ್ಗೆ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ ಬಳಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಆಗ ಚಿರತೆ ಮನೆಯ ಮುಂದೆ ಓಡಾಡಿರುವುದು ಸ್ಪಷ್ಟವಾಗಿದೆ.
ಇದೇ ಪ್ರದೇಶದಲ್ಲಿ ಈ ಹಿಂದೆ ಕೂಡ ಚಿರತೆ ಕಾಣಿಸಿಕೊಂಡಿದ್ದರಿಂದ ನಿವಾಸಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ. ಜುಲೈ 25ರಂದು ಸಂಜೆ ಸುಮಾರು 7 ಗಂಟೆಗೆ ಬನಶಂಕರಿ 5ನೇ ಹಂತದ 2ನೇ ಬ್ಲಾಕ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಆಗ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಪಟಾಕಿ ಸಿಡಿಸಿ ಅದನ್ನು ಕಾಡಿನತ್ತ ಓಡಿಸಿದ್ದರು.
ಆದರೆ, ಕೆಲವೇ ವಾರಗಳ ಬಳಿಕ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ವಿಶೇಷವಾಗಿ ಸಣ್ಣ ಮಕ್ಕಳಿರುವ ಕುಟುಂಬಗಳು ಹೆಚ್ಚು ಆತಂಕದಲ್ಲಿದ್ದು, ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಈ ಬಾರಿ ಕೇವಲ ಪರಿಶೀಲನೆ ನಡೆಸುವುದಕ್ಕೆ ಸೀಮಿತವಾಗದೆ, ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಬೋನು (Cage Trap) ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಜನವಸತಿ ಪ್ರದೇಶಕ್ಕೆ ಪದೇಪದೆ ಚಿರತೆ ಬರುತ್ತಿರುವುದರಿಂದ ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.



