ಬೆಂಗಳೂರು ತ್ರಿವಳಿ ಕೊಲೆ ಪ್ರಕರಣ: ಕರ್ನಾಟಕ ಹೈಕೋರ್ಟ್ ತೀರ್ಪು, ನಾಲ್ವರಿಗೆ ಜೀವಾವಧಿ ಶಿಕ್ಷೆ
ಬೆಂಗಳೂರಿನಲ್ಲಿ ನಿವೃತ್ತ ಐಐಎಸ್‌ಸಿ ಪ್ರೊಫೆಸರ್ ಕುಟುಂಬದ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 17 ವರ್ಷಗಳ ಬಳಿಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಂಗಳೂರು (Bengaluru): ಇಡೀ ಬೆಂಗಳೂರು ನಗರವನ್ನು ಬೆಚ್ಚಿಬೀಳಿಸಿದ್ದ ತ್ರಿವಳಿ ಹತ್ಯೆ ಪ್ರಕರಣಕ್ಕೆ 17 ವರ್ಷಗಳ ನಂತರ ಮಹತ್ವದ ತೀರ್ಪು ಬಂದಿದೆ. ನಿವೃತ್ತ ಐಐಎಸ್‌ಸಿ ಪ್ರೊಫೆಸರ್ ಮತ್ತು ಅವರ ಕುಟುಂಬದ ಮೂವರ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮೂಲದ ದೀಪಕ್ ಹಲ್ದಾರ್, ಆತನ ಪತ್ನಿ ಸುಚಿತ್ರಾ ಹಲ್ದಾರ್, ಮೊಹಮ್ಮದ್ ಸರ್ಬಲ್ ಮತ್ತು ಬಿದನ್ ಶಿಕಾರಿ ಎಂಬ ನಾಲ್ವರು ಆರೋಪಿಗಳಾಗಿದ್ದು, ನ್ಯಾಯಾಲಯವು ಅವರ ಮೇಲೆ ಗಂಭೀರ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದೆ.
ಈ ಹಿಂದೆ ಬೆಂಗಳೂರಿನ 65ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ ಆ ತೀರ್ಪನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಪ್ರಕರಣವನ್ನು ಮರುಪರಿಶೀಲಿಸಿ ಹೊಸ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಹೆಚ್.ಪಿ. ಸಂದೇಶ್ ಮತ್ತು ಟಿ. ವೆಂಕಟೇಶ್ ನಾಯಕ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ತನಿಖೆ ವೇಳೆ ಬಹಿರಂಗವಾದ ಮಾಹಿತಿಯ ಪ್ರಕಾರ, ಆರೋಪಿಗಳು ಹಣ ಮತ್ತು ಚಿನ್ನಾಭರಣದ ಆಸೆಯಿಂದ ಈ ಹತ್ಯೆಯನ್ನು ಯೋಜಿಸಿದ್ದರು. ಆರೋಪಿಗಳಲ್ಲಿ ದೀಪಕ್ ಹಲ್ದಾರ್ ಹಾಗೂ ಸುಚಿತ್ರಾ ಹಲ್ದಾರ್ ದಂಪತಿ ಮೃತ ಪ್ರೊಫೆಸರ್ ಅವರ ಮನೆಯಲ್ಲಿ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದರು.
ಈ ಘಟನೆ 2009ರ ಫೆಬ್ರವರಿ 16ರಂದು ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದೆ. ನಿವೃತ್ತ ಐಐಎಸ್‌ಸಿ ಪ್ರೊಫೆಸರ್ ಪುರುಷೋತ್ತಮ ಲಾಲ್ ಸಚ್‌ದೇವ್ (71), ಅವರ ಪತ್ನಿ ರೀಟಾ ಸಚ್‌ದೇವ್ (62) ಮತ್ತು ಪುತ್ರ ಮುನ್ನಾ (35) ತಮ್ಮ ನಿವಾಸದಲ್ಲಿ ವಾಸಿಸುತ್ತಿದ್ದರು.
ಅಂದು ಆರೋಪಿಗಳು ಮನೆಗೆ ನುಗ್ಗಿ ಮೂವರನ್ನೂ ಕತ್ತು ಹಿಸುಕಿ ಹತ್ಯೆ ಮಾಡಿ ನಂತರ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಘಟನೆ ನಗರದಲ್ಲಿ ದೊಡ್ಡ ಆತಂಕ ಉಂಟುಮಾಡಿತ್ತು.
ತೀರ್ಪು ನೀಡುವ ವೇಳೆ ನ್ಯಾಯಪೀಠವು ಮಹತ್ವದ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ. ಮನೆಗಳಲ್ಲಿ ಕೆಲಸಕ್ಕೆ ನೇಮಿಸುವ ವಲಸೆ ಕಾರ್ಮಿಕರ ಬಗ್ಗೆ ಪೊಲೀಸ್ ಪರಿಶೀಲನೆ (Police Verification) ಮಾಡುವುದು ಅಗತ್ಯ ಎಂದು ನ್ಯಾಯಾಲಯ ಸೂಚಿಸಿದೆ.
ವಲಸೆ ಕಾರ್ಮಿಕರ ವಿವರಗಳನ್ನು ಪರಿಶೀಲಿಸಲು ಸರ್ಕಾರ ಸುಲಭವಾದ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೂಡ ನ್ಯಾಯಪೀಠ ಸಲಹೆ ನೀಡಿದೆ. ಈ ಪ್ರಕ್ರಿಯೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.



