ಬೆಂಗಳೂರು: ಮೃತದೇಹ ಪತ್ತೆಯಾಗದಿದ್ದರೂ ಕೊಲೆ ಸಾಬೀತು: ಇಬ್ಬರಿಗೆ ಜೀವಾವಧಿ ಶಿಕ್ಷೆ
ಮೃತದೇಹ ಪತ್ತೆಯಾಗದಿದ್ದರೂ ಸಿಸಿಟಿವಿ, ಮೊಬೈಲ್ ಸಿಡಿಆರ್ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಸೀತಾ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಂಗಳೂರು (Bengaluru), ಸೆ.29: ಮೃತದೇಹವೇ ಪತ್ತೆಯಾಗದ ಕೊಲೆ ಪ್ರಕರಣವೊಂದರಲ್ಲಿ ಬೆಂಗಳೂರಿನ 60ನೇ ಸಿಸಿಎಚ್ (CCH) ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮಂತ್ರಾಲಯ ಮೂಲದ ಸೀತಾ (47) ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ನೂರ್ ಅಹ್ಮದ್ ಹಾಗೂ ಸತ್ಯನಾರಾಯಣ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇಬ್ಬರಿಗೂ ತಲಾ ₹30,000 ದಂಡವನ್ನು ನ್ಯಾಯಾಲಯ ವಿಧಿಸಿದೆ.
2021ರ ಮಾರ್ಚ್‌ನಲ್ಲಿ ಸೀತಾ ನಾಪತ್ತೆಯಾಗಿದ್ದರು. ಈ ಸಂಬಂಧ ಅವರ ಸಹೋದರ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಸೀತಾ ಅವರ ಮೊಬೈಲ್ ಸಿಡಿಆರ್ (CDR) ಪರಿಶೀಲಿಸಿದಾಗ, ಅವರು ಕೊನೆಯದಾಗಿ ‘ಮೆಂಟಲ್ ರಘು’ ಜೊತೆ ಮಾತನಾಡಿರುವುದು ಪತ್ತೆಯಾಗಿತ್ತು.
ತನಿಖೆ ಮುಂದುವರಿಸಿದ ಪೊಲೀಸರು ರಘು ಸೇರಿದಂತೆ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಸೀತಾಳನ್ನು ಕೊಲೆ ಮಾಡಲು ರೂಪಿಸಿದ್ದ ಸಂಚಿನ ಹಲವು ವಿವರಗಳು ಪೊಲೀಸರಿಗೆ ಲಭ್ಯವಾಗಿದ್ದವು. ಪ್ರಕರಣದಲ್ಲಿ ರಘು ಮತ್ತು ಬೆಸ್ತನಾಕುಮಾರ್ ಕೂಡ ಆರೋಪಿಗಳಾಗಿದ್ದರು. ಆದರೆ ಕೋವಿಡ್ ಅವಧಿಯಲ್ಲಿ ಅವರಿಬ್ಬರೂ ಮೃತಪಟ್ಟಿದ್ದರು.
ಸೀತಾ ಅವರ ಕುಟುಂಬಕ್ಕೆ ಸೇರಿದ ಮಂತ್ರಾಲಯ ಬಳಿಯ ಎರಡು ಎಕರೆ ಜಮೀನಿನ ವಿಚಾರವೇ ಕೊಲೆಗೆ ಪ್ರಮುಖ ಕಾರಣವಾಗಿತ್ತು. ನೂರ್ ಅಹ್ಮದ್ ಜಮೀನಿನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರೂ, ನೋಂದಣಿ ಪ್ರಕ್ರಿಯೆಗೆ ಸೀತಾ ಸಹಿ ಹಾಕಲು ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ನೂರ್ ಅಹ್ಮದ್, ಸೀತಾಳನ್ನು ಕೊಲೆ ಮಾಡಲು ಇತರರ ನೆರವು ಪಡೆದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
2021ರ ಮಾರ್ಚ್ 25ರಂದು ‘ಬಂಗಾರದ ಡೀಲ್’ ಇದೆ ಎಂದು ಸೀತಾಳನ್ನು ನಂಬಿಸಿ ಆರೋಪಿಗಳು ಮೆಜೆಸ್ಟಿಕ್‌ನಿಂದ ಇಂಡಿಕಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಹಾಸನ ಮಾರ್ಗದಲ್ಲಿ ತೆರಳುವ ವೇಳೆ ಎಂಪೈರ್ ಹೋಟೆಲ್‌ನಲ್ಲಿ ಜ್ಯೂಸ್‌ಗೆ ಸೈನೆಡ್ (Cyanide) ಬೆರೆಸಿ ನೀಡಲು ಪ್ರಯತ್ನಿಸಿದ್ದರು. ಆದರೆ ಜ್ಯೂಸ್‌ನ ಬಣ್ಣ ಬದಲಾಗಿದ್ದರಿಂದ ಅನುಮಾನಗೊಂಡ ಸೀತಾ ಅದನ್ನು ಕುಡಿಯಲಿಲ್ಲ.
ನಂತರ ಕುಂದೂರು ಮಠದ ರಸ್ತೆಯಲ್ಲಿ ಕಾರು ನಿಲ್ಲಿಸಿ ಸೀತಾ ಮಲಗಿದ್ದ ಸಂದರ್ಭದಲ್ಲಿ ಕಲ್ಲಿನಿಂದ ತಲೆಗೆ ಹೊಡೆಯಲು ಆರೋಪಿಗಳು ಪ್ರಯತ್ನಿಸಿದ್ದರು. ಗಾಯಗೊಂಡ ಸೀತಾಳನ್ನು ಬಳಿಕ ಬೇಲೂರು ಸಮೀಪದ ಕ್ಲಿನಿಕ್‌ಗೆ ಕರೆದೊಯ್ದು, ಕಲ್ಲಿನಿಂದ ಯಾರೋ ಹೊಡೆದು ಪರಾರಿಯಾಗಿದ್ದಾರೆ ಎಂದು ಸುಳ್ಳು ಕಥೆ ಹೇಳಿ ಬ್ಯಾಂಡೇಜ್ ಹಾಕಿಸಿದ್ದರು.
ಆ ಬಳಿಕ ಚಿಕ್ಕಮಗಳೂರಿನ ಮಯೂರ ಹೋಟೆಲ್ ಬಳಿ ಕಾರು ನಿಲ್ಲಿಸಿ, ಟಾಯ್ಲೆಟ್‌ನಲ್ಲಿ ನೋವಿನ ಮಾತ್ರೆಯೊಳಗೆ ಸೈನೆಡ್ ತುಂಬಿ ಸಿದ್ಧಪಡಿಸಿಕೊಂಡಿದ್ದರು. ನಂತರ ದಾರಿಯಲ್ಲಿ ಸೀತಾಳಿಗೆ ನೋವಿನ ಮಾತ್ರೆ ಎಂದು ನೀಡಿ, ಕೆಲವೇ ಕ್ಷಣಗಳಲ್ಲಿ ಆಕೆ ಕಾರಿನಲ್ಲೇ ಮೃತಪಟ್ಟಿದ್ದಾಳೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಕೊಲೆ ಬಳಿಕ ಹೊಸಪೇಟೆಯ ಹುಲಿಗೆಮ್ಮ ರಸ್ತೆಯ ಬಳಿ ಕಾರು ನಿಲ್ಲಿಸಿ ಸೀತಾ ಧರಿಸಿದ್ದ ಸುಮಾರು 30 ಗ್ರಾಂ ಚಿನ್ನದ ಬಳೆಗಳನ್ನು ಆರೋಪಿಗಳು ತೆಗೆದುಕೊಂಡಿದ್ದರು. ನಂತರ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಕಲ್ಲು ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದಿದ್ದರು. ಬಳಿಕ ಚಿನ್ನದ ಬಳೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಂಡಿದ್ದರು ಎಂದು ಪ್ರಕರಣದ ದಾಖಲೆಗಳಲ್ಲಿ ತಿಳಿಸಲಾಗಿದೆ.
ಮೃತದೇಹಕ್ಕಾಗಿ ಪೊಲೀಸರು ತುಂಗಭದ್ರಾ ಕಾಲುವೆಯಲ್ಲಿ ಹಲವು ಬಾರಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೂ ಸಿಸಿಟಿವಿ ದೃಶ್ಯಗಳು, ಮೊಬೈಲ್ ಸಿಡಿಆರ್, ಚಿನ್ನ ಮಾರಾಟದ ವಿವರಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಈ ಸಾಕ್ಷ್ಯಗಳ ಆಧಾರದ ಮೇಲೆ ಸುಬ್ರಹ್ಮಣ್ಯನಗರ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಮೃತದೇಹ ಪತ್ತೆಯಾಗದಿದ್ದರೂ ಲಭ್ಯವಿದ್ದ ಸಾಕ್ಷ್ಯಗಳ ಸರಪಳಿಯನ್ನು ಪರಿಗಣಿಸಿದ ನ್ಯಾಯಾಲಯ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹30,000 ದಂಡ ವಿಧಿಸಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



