Bengaluru Rains: ಬೆಂಗಳೂರು ನಗರದ ಹಲವೆಡೆ ತುಂತುರು ಮಳೆ! ಬಿಸಿಲಿನ ತಾಪಕ್ಕೆ ತಂಪೆರೆದ ವರುಣ
Bengaluru Rains: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯುಗಾದಿ ಮುನ್ನವೇ ಬೇಸಿಗೆ ಮಳೆ ಆರಂಭವಾಗಿದೆ. ನಗರದಲ್ಲಿ ಹಲವೆಡೆ ತುಂತುರು ಮಳೆಯಾಗಿದ್ದು, ಕಳೆದ ಕೆಲ ದಿನಗಳಿಂದ ಕಾಡಿದ್ದ ಬಿಸಿಲಿನ ತಾಪಕ್ಕೆ ಜನರಿಗೆ ತಂಪು ನೀಡಿದೆ.

ಬೆಂಗಳೂರು (Bengaluru): ಕಳೆದ ಕೆಲವು ದಿನಗಳಿಂದ ಹೆಚ್ಚಾದ ಬಿಸಿಲಿನ ತಾಪದಿಂದ ಬೇಸತ್ತಿದ್ದ ಬೆಂಗಳೂರು ಜನರಿಗೆ ಮಳೆ (Bangalore Rains) ಸ್ವಲ್ಪ ತಂಪಿನ ಅನುಭವ ನೀಡಿದೆ. ನಗರದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ.
ಕೆಂಗೇರಿ ಸುತ್ತಮುತ್ತ ಜೋರಾಗಿ ಮಳೆಯಾದರೆ, ರಿಚ್‌ಮಂಡ್ ಟೌನ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯ ಸಿಂಚನ ಕಂಡುಬಂತು. ವಿಜಯನಗರ, ದೀಪಾಂಜಲಿನಗರ ಹಾಗೂ ಮೈಸೂರು ರಸ್ತೆಯ ಭಾಗಗಳಲ್ಲಿಯೂ ಮಳೆಯ ತುಂತುರು ಸುರಿದು ನಗರದಲ್ಲಿ ಸ್ವಲ್ಪ ಮಟ್ಟಿಗೆ ತಂಪು ಹೆಚ್ಚಿಸಿತು.
ಇತ್ತೀಚೆಗೆ ನಗರದಲ್ಲಿ ಉಷ್ಣಾಂಶ ಹೆಚ್ಚಾಗಿ ಜನರು ಬಿಸಿಲಿನ ತಾಪದಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಸುರಿದ ಮೊದಲ ಮಳೆ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಆದರೆ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ರಾಜ್ಯದ ಇತರ ಭಾಗಗಳಲ್ಲಿಯೂ ಮಳೆಯ ಆರ್ಭಟ ಕಂಡುಬಂದಿದೆ. ಬೆಳಗಾವಿ ನಗರದಲ್ಲಿ ಭಾರೀ ಮಳೆಯಾಗಿ ರಾಮತೀರ್ಥ ನಗರದಲ್ಲಿರುವ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿಗೆ ನೀರು ನುಗ್ಗಿದ ಘಟನೆ ನಡೆದಿದೆ. ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಭಾಗಶಃ ನೀರಿನಲ್ಲಿ ಮುಳುಗಿದರೆ, ಚರಂಡಿ ನೀರು ಒಳನುಗ್ಗಿದ್ದರಿಂದ ಸಿಬ್ಬಂದಿ ಕಚೇರಿಯೊಳಗೆ ಸಿಲುಕಿದ ಸ್ಥಿತಿ ನಿರ್ಮಾಣವಾಯಿತು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ. ಇತ್ತ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲೂ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನರಿಗೆ ಸ್ವಲ್ಪ ತಂಪು ನೀಡಿದೆ. ಆದರೆ ಮಳೆಯಿಂದ ಕೆಲವು ಸ್ಥಳಗಳಲ್ಲಿ ವಾಹನ ಸವಾರರು ಸಂಚಾರದಲ್ಲಿ ತೊಂದರೆ ಅನುಭವಿಸಿದರು.
ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಇನ್ನೂ ಮೂರು–ನಾಲ್ಕು ದಿನ ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಕೆಲವೆಡೆ ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.



