ಬೆಂಗಳೂರು ಮಹದೇವಪುರ ಮತಗಳ್ಳತನ ಆರೋಪಕ್ಕೆ ಅರವಿಂದ್ ಲಿಂಬಾವಳಿ ತಿರುಗೇಟು

ರಾಹುಲ್ ಗಾಂಧಿ ಮಾಡಿದ ಮಹದೇವಪುರ ಮತಗಳ್ಳತನ ಆರೋಪಗಳಿಗೆ, ಮಾಜಿ ಶಾಸಕ ಅರವಿಂದ್ ಲಿಂಬಾವಳಿ ದಾಖಲೆಗಳೊಂದಿಗೆ ಉತ್ತರಿಸಿದರು. ಯಾವುದೇ ಅಕ್ರಮವಾಗಿಲ್ಲ, ಚುನಾವಣೆ ಸಕ್ರಮವಾಗಿದೆ ಎಂದು ಸ್ಪಷ್ಟನೆ ನೀಡಿ ಆರೋಪಗಳನ್ನು ತಳ್ಳಿ ಹಾಕಿದರು.

  • ಮಹದೇವಪುರ ಮತಗಳ್ಳತನ ಆರೋಪಕ್ಕೆ ಲಿಂಬಾವಳಿ ದಾಖಲೆ ಸಮೇತ ಉತ್ತರ
  • ರಾಹುಲ್ ಗಾಂಧಿ ಆರೋಪಗಳನ್ನು ನಿರಾಧಾರ ಎಂದು ತಳ್ಳಿ ಹಾಕಿದರು
  • ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ನೆನಪಿಸಿದ ಲಿಂಬಾವಳಿ

ಬೆಂಗಳೂರು (Bengaluru): ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಅರವಿಂದ್ ಲಿಂಬಾವಳಿ (Arvind Limbavali) ಗಟ್ಟಿಯಾದ ತಿರುಗೇಟು ನೀಡಿದ್ದಾರೆ. ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆಯಲ್ಲಿ ಯಾವುದೇ ಅಕ್ರಮವಾಗಿಲ್ಲ, ಎಲ್ಲವೂ ಸಕ್ರಮವಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಹೇಳಿದ ಐದು ಹಂತದ ಆರೋಪಗಳಿಗೆ ಅವರು ದಾಖಲೆಗಳೊಂದಿಗೆ ಉತ್ತರಿಸಿದ್ದಾರೆ. “ರಾಹುಲ್ ಗಾಂಧಿ ನೀಡಿರುವ ಸಂಖ್ಯೆಗಳು, ಉದಾಹರಣೆಗಳು ವಾಸ್ತವಕ್ಕೆ ದೂರ. ಚುನಾವಣೆ ಆಯೋಗವೇ ಈ ಪರಿಶೀಲನೆ ನಡೆಸಿದ್ದು, ಅನೇಕ ಆರೋಪಗಳು ಕೇವಲ ರಾಜಕೀಯ ಪ್ರಚಾರಕ್ಕಾಗಿ ಮಾಡಲಾಗಿದೆ,” ಎಂದು ಲಿಂಬಾವಳಿ ಹೇಳಿದರು.

ಇದನ್ನೂ ಓದಿ: ಬೆಂಗಳೂರು ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತ; ರಾಹುಲ್ ಗಾಂಧಿ ಆರೋಪ

ಡುಪ್ಲಿಕೇಟ್ ಮತದಾರರ ಬಗ್ಗೆ ಬಂದ ಪ್ರಶ್ನೆಗೆ, “ಕೆಲವರು ಒಂದೇ ಹೆಸರಿನಲ್ಲಿ ಬೇರೆ ಕಡೆಗಳಲ್ಲಿ ಹೆಸರು ಸೇರಿಸಲು ಅರ್ಜಿ ಕೊಟ್ಟಿದ್ದರೂ, ಆಯೋಗವೇ ಅವುಗಳನ್ನು ತಿರಸ್ಕರಿಸಿದೆ. ಕೆಲವರು ಮನೆ ಬದಲಾವಣೆ ಮಾಡಿದ ಕಾರಣ ಹೊಸ ಬೂತ್‌ನಲ್ಲಿ ಮತ ಹಾಕಿದ್ದಾರೆ. ಇದರಲ್ಲಿ ಅಕ್ರಮವೇ ಇಲ್ಲ” ಎಂದು ಅವರು ವಿವರಿಸಿದರು.

ಒಂದೇ ವಿಳಾಸದಲ್ಲಿ ಸಾವಿರಾರು ಮತದಾರರಿದ್ದಾರೆ ಎನ್ನುವ ಆರೋಪಕ್ಕೂ ಲಿಂಬಾವಳಿ ಪ್ರತಿಕ್ರಿಯಿಸಿ, “ಪರಿಶೀಲನೆ ನಡೆಸಿದಾಗ ಕೇವಲ ಕೆಲವೇ ಪ್ರಕರಣಗಳು ಕಂಡುಬಂದಿವೆ. ಇದು ಬಲ್ಕ್ ವೋಟರ್ಸ್ ವಿಷಯವಲ್ಲ. ಇದೇ ರೀತಿಯ ಉದಾಹರಣೆಗಳು ಇತರ ಕ್ಷೇತ್ರಗಳಲ್ಲಿಯೂ ಇವೆ” ಎಂದರು.

ಇದನ್ನೂ ಓದಿ: ಬೆಂಗಳೂರು: ದೇಶದಲ್ಲಿ ಮತದಾನ ಅಕ್ರಮ ನಡೆದಿದೆ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಮನೆ ವಿಳಾಸದ ಜಾಗದಲ್ಲಿ ‘ಜೀರೋ’ ಇರುವ ಪ್ರಕರಣಗಳ ಬಗ್ಗೆ ಮಾತನಾಡಿದ ಲಿಂಬಾವಳಿ, “ಇದು ತಾಂತ್ರಿಕ ದೋಷ. ವರುಣಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದೇ ರೀತಿ ಇದೆ. ಇದು ಚುನಾವಣಾ ಆಯೋಗದ ಹೊಣೆಗಾರಿಕೆ, ಅಕ್ರಮದ ಲಕ್ಷಣವಲ್ಲ” ಎಂದು ಹೇಳಿದರು.

ಹೊಸ ಮತದಾರರ ಫಾರ್ಮ್ 6 ದುರ್ಬಳಕೆ ಆರೋಪಕ್ಕೂ ಅವರು ತಿರುಗೇಟು ನೀಡಿದರು. “ರಾಹುಲ್ ಗಾಂಧಿ ಉಲ್ಲೇಖಿಸಿದ ಶಕುನ್ ರಾಣಿ ಕೇವಲ ಒಂದೇ ಕಡೆ ಮತ ಹಾಕಿದ್ದಾರೆ. ಈ ವಿಷಯಕ್ಕೂ ದಾಖಲೆಗಳಿವೆ” ಎಂದು ಸ್ಪಷ್ಟನೆ ನೀಡಿದರು.

Limbavali Counters Rahul’s Mahadevapura Vote Fraud Claim

English Summary▼

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories