Bengaluru: ಬೆಂಗಳೂರು ಲವ್–ಸೆಕ್ಸ್–ಧೋಖಾ ಪ್ರಕರಣ, ಖತರ್ನಾಕ್ ಆರೋಪಿ ಪೊಲೀಸರ ವಶಕ್ಕೆ

ಬೆಂಗಳೂರು ನೆಲಮಂಗಲದ ಬಾಗಲಗುಂಟೆ ವ್ಯಾಪ್ತಿಯಲ್ಲಿ ಲಿವ್‌ ಇನ್‌ ಸಂಬಂಧದ ಹೆಸರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಆಕೆಯ ತಂಗಿಯ ಮೇಲೂ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

  • ಲಿವ್‌ ಇನ್‌ ವಂಚನೆ: ಸಂಗಾತಿಗೆ ಲೈಂಗಿಕ ಶೋಷಣೆ
  • ಸಂತ್ರಸ್ತೆಯ ತಂಗಿಯ ಮೇಲೂ ಲೈಂಗಿಕ ದೌರ್ಜನ್ಯ
  • ಆರೋಪಿ ಬಂಧನ: ಶುಭಾಂಶು ಶುಕ್ಲಾ ಪೊಲೀಸರ ವಶಕ್ಕೆ

ಬೆಂಗಳೂರು (Bengaluru): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ “ಲವ್–ಸೆಕ್ಸ್–ಧೋಖಾ” ಪ್ರಕರಣ ಬೆಳಕಿಗೆ ಬಂದಿದೆ. ಲಿವ್‌ ಇನ್‌ ಸಂಬಂಧದ (Live-in Relationship) ನೆಪದಲ್ಲಿ ಯುವತಿಯನ್ನು ಲೈಂಗಿಕವಾಗಿ ಶೋಷಿಸಿ, ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿದ ಆರೋಪದಲ್ಲಿ ವಿವಾಹಿತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣವು ಬೆಂಗಳೂರಿನ ನೆಲಮಂಗಲದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಿಳಿದುಬಂದಿದೆ.

ಬಂಧಿತ ಆರೋಪಿಯನ್ನು 27 ವರ್ಷದ ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದೆ. ಮೂಲತಃ ಹರಿಯಾಣ ಮೂಲದವನಾದ ಈತ, ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ. ದಾಸರಹಳ್ಳಿ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ. ಐಷಾರಾಮಿ ಜೀವನಶೈಲಿ ತೋರಿಸಿ ಯುವತಿಯರನ್ನು ಪ್ರೀತಿ ಬಲೆಗೆ ಬೀಳಿಸಿ ವಂಚಿಸುತ್ತಿದ್ದ ಆರೋಪ ಈತನ ಮೇಲೆ ಕೇಳಿಬಂದಿದೆ.

ನಂಬಿಕೆ ಪಡೆದ ಬಳಿಕ ಶೋಷಣೆ

ಪೊಲೀಸರ ಮಾಹಿತಿ ಪ್ರಕಾರ, ಮೊದಲಿಗೆ ಸಂತ್ರಸ್ತೆಯ ಕುಟುಂಬದ ಪರಿಚಯ ಪಡೆದ ಶುಭಾಂಶು, ನಂತರ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ತನ್ನತ್ತ ಸೆಳೆದುಕೊಂಡಿದ್ದ. ಬಳಿಕ ಫ್ಲ್ಯಾಟ್‌ನಲ್ಲಿ ಲಿವ್‌ ಇನ್‌ ಸಂಬಂಧ ಮುಂದುವರೆಸಿದ್ದಾನೆ. ಈ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿ, ಹಣಕಾಸಿನ ಲಾಭಕ್ಕಾಗಿ ಯುವತಿಯನ್ನು ನಿರಂತರವಾಗಿ ಬೆದರಿಸಿದ್ದಾನೆ ಎಂದು ದೂರಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು: ಕೇರಳ ರಾಜಕೀಯ ನಾಯಕರ ಭೇಟಿ

ವಿವಾಹಿತನಾಗಿದ್ದು ಸತ್ಯ ಮರೆಮಾಚಿದ್ದ

ಕೆಲ ದಿನಗಳ ಬಳಿಕ ಆರೋಪಿಗೆ ಈಗಾಗಲೇ ಮದುವೆಯಾಗಿದೆ ಎಂಬ ಸತ್ಯ ಸಂತ್ರಸ್ತೆಗೆ ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ವಿಚ್ಛೇದನ ಪಡೆಯುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದಾನೆ ಎನ್ನಲಾಗಿದೆ. ಆತನ ಪತ್ನಿಯೂ ಸಂತ್ರಸ್ತೆಯೊಂದಿಗೆ ಮಾತನಾಡಿ ವಿಚ್ಛೇದನ ನೀಡುವುದಾಗಿ ಹೇಳಿದ್ದರಿಂದ, ಯುವತಿ ಮತ್ತೆ ನಂಬಿಕೆ ಇಟ್ಟಿದ್ದಾಳೆ ಎಂದು ಹೇಳಲಾಗಿದೆ.

37 ಲಕ್ಷ ರೂ ವಂಚನೆ, ಜೀವ ಬೆದರಿಕೆ

ಸಂತ್ರಸ್ತೆಯಿಂದ ಸುಮಾರು 37 ಲಕ್ಷ ರೂ ಹಣ ಪಡೆದಿದ್ದ ಆರೋಪಿ, ಆಕೆಯ ಮನೆಯಿಂದ ಸುಮಾರು 559 ಗ್ರಾಂ ಚಿನ್ನಾಭರಣ ಕದ್ದಿರುವ ಆರೋಪವೂ ಇದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನಿರಂತರ ಹಿಂಸೆ ತಾಳಲಾರದೆ ಸಂತ್ರಸ್ತೆ ಆತನಿಂದ ದೂರವಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ತಂಗಿಯ ಮೇಲೂ ಗಂಭೀರ ಆರೋಪ

ಈ ಪ್ರಕರಣದ ಮತ್ತೊಂದು ಭೀಕರ ಅಂಶವೆಂದರೆ, ಸಂತ್ರಸ್ತೆಯ ಅಪ್ರಾಪ್ತ ವಯಸ್ಸಿನ ತಂಗಿಯ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ. ಓದು–ಗ್ರೂಪ್‌ ಸ್ಟಡಿ ಹೆಸರಿನಲ್ಲಿ ಪರಿಚಯ ಬೆಳೆಸಿ, ನಂತರ ಬೆದರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ವಿಷಯ ಬಹಿರಂಗಪಡಿಸಿದರೆ ಕುಟುಂಬಕ್ಕೆ ಹಾನಿ ಮಾಡುವ ಬೆದರಿಕೆ ನೀಡಿದ್ದಾನೆ ಎಂಬುದೂ ಆರೋಪವಾಗಿದೆ.

ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಮಹಿಳೆಯರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಈ ಘಟನೆ ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories