ಪಕ್ಕದ್ಮನೆ ಆಂಟಿ ಮೇಲೆ ಅಂಕಲ್‌ಗೆ ಕಣ್ಣು, ಹಿಂಬದಿಯಿಂದ ತಬ್ಬಿಕೊಂಡು ಅವಾಂತರ

ಬೆಂಗಳೂರಿನ ಶಂಕರಪುರದಲ್ಲಿ ಪಕ್ಕದ ಮನೆಯ ಮಹಿಳೆಯನ್ನು ಹಿಂಬದಿಯಿಂದ ತಬ್ಬಿಕೊಂಡ ವ್ಯಕ್ತಿ, ಪ್ರಶ್ನೆ ಮಾಡಿದ ಮಹಿಳೆಯ ಪತಿಯ ಮೇಲೆಯೇ ಮಚ್ಚು ಹಾಗೂ ತವಾದಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ

ಬೆಂಗಳೂರು ನಗರದ ಶಂಕರಪುರದ ರಂಗಾರಾವ್ ರಸ್ತೆಯಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಪಕ್ಕದ ಮನೆಯ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಇಬ್ಬರ ನಡುವೆ ಜಗಳ ತೀವ್ರಗೊಂಡು ಹಲ್ಲೆಯ ಮಟ್ಟಕ್ಕೆ ತಲುಪಿದೆ.

ನಂದೀಶ್ ಹಾಗೂ ಅವರ ಪತ್ನಿ ಶಂಕರಪುರದಲ್ಲಿರುವ ವಠಾರವೊಂದರಲ್ಲಿ ವಾಸವಾಗಿದ್ದರು. ಅದೇ ವಠಾರದಲ್ಲಿ ಪುಟ್ಟರಾಜು ಮತ್ತು ಆತನ ಕುಟುಂಬವೂ ನೆಲೆಸಿತ್ತು. ಮಹಿಳೆ ಪಾತ್ರೆ ತೊಳೆಯುವ ಸಂದರ್ಭಗಳಲ್ಲಿ ಪುಟ್ಟರಾಜು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದನೆಂದು ಕುಟುಂಬದವರು ಆರೋಪಿಸಿದ್ದಾರೆ.

ಮೇ 4ರ ರಾತ್ರಿ ಸುಮಾರು 8.30ರ ವೇಳೆಗೆ ಮಹಿಳೆ ಮನೆಯ ಹೊರಭಾಗದಲ್ಲಿ ಪಾತ್ರೆ ತೊಳೆಯುತ್ತಿದ್ದಾಗ, ಪುಟ್ಟರಾಜು ಹಿಂಬದಿಯಿಂದ ಬಂದು ಆಕೆಯನ್ನು ತಬ್ಬಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಮಹಿಳೆಯ ಪತಿ ನಂದೀಶ್ ಕೋಪಗೊಂಡು ಆರೋಪಿಯನ್ನು ಪ್ರಶ್ನಿಸಲು ಮುಂದಾಗಿದ್ದಾರೆ.

ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ನಂದೀಶ್ ಕೈಯಲ್ಲಿದ್ದ ಎಳನೀರು ಕೊಯ್ಯುವ ಮಚ್ಚನ್ನು ಕಸಿದುಕೊಂಡ ಪುಟ್ಟರಾಜು, ಆತನ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ ದೋಸೆ ತವಾದಿಂದಲೂ ಹೊಡೆದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ನಂದೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಪುಟ್ಟರಾಜುವನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

Related Stories