Bengaluru Local: ಅಣ್ಣನ ಮನೆಗೆ ಬೆಂಕಿ ಹಚ್ಚಲು ಹೋದ ತಮ್ಮನೇ ಸುಟ್ಟ! ಬೆಂಗಳೂರು ಹೊಸಕೋಟೆ ಘಟನೆ

ಹಣಕಾಸಿನ ಮನಸ್ತಾಪದಿಂದ ಅಣ್ಣನ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ ತಮ್ಮ, ಪೆಟ್ರೋಲ್ ಡಬ್ಬೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ತೀವ್ರವಾಗಿ ಸುಟ್ಟುಕೊಂಡ ಘಟನೆ ಹೊಸಕೋಟೆ ಬಳಿ ನಡೆದಿದೆ.

  • ಹಣಕಾಸಿನ ಕಲಹ, ಅಣ್ಣನ ಮನೆಗೆ ಬೆಂಕಿ ಯತ್ನ
  • ಪೆಟ್ರೋಲ್ ಡಬ್ಬೆಗೆ ಏಕಾಏಕಿ ಬೆಂಕಿ, ತಮ್ಮನೇ ಸುಟ್ಟ
  • ಹೊಸಕೋಟೆ ಪ್ರಕರಣ, ಪೊಲೀಸ್ ತನಿಖೆ

ಬೆಂಗಳೂರು ಗ್ರಾಮಾಂತರ (Bengaluru Rural): ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಸಮೀಪದ ಗೋವಿಂದಪುರದಲ್ಲಿ ಹಣಕಾಸಿನ ವಿವಾದ ಭೀಕರ ಅವಘಡಕ್ಕೆ ಕಾರಣವಾಗಿದೆ. ಅಣ್ಣನ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ತಮ್ಮನೇ ಆಕಸ್ಮಿಕವಾಗಿ ಸುಟ್ಟು ಗಾಯಗೊಂಡಿರುವ ಘಟನೆ ನಡೆದಿದೆ.

ಆರೋಪಿ ಮುನಿರಾಜು, ಅಣ್ಣ ರಾಮಕೃಷ್ಣ ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದ ಪೆಟ್ರೋಲ್ ಡಬ್ಬೆ ಹಿಡಿದು ಬಂದಿದ್ದ. ಆದರೆ ಪೆಟ್ರೋಲ್ ಸುರಿಸುವ ವೇಳೆ ಕೈಯಲ್ಲಿದ್ದ ಡಬ್ಬೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು, ಮುಖ, ಕೈ ಹಾಗೂ ಕಾಲಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಆತನ ಚೀರಾಟ ಕೇಳಿ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಿ, ಹೊಸಕೋಟೆ ಆಸ್ಪತ್ರೆಗೆ (Hoskote Hospital) ದಾಖಲಿಸಿದ್ದಾರೆ.

ಹಣಕಾಸಿನ ಒತ್ತಡವೇ ಸಂಘರ್ಷಕ್ಕೆ ಕಾರಣ

ಮುನಿರಾಜು ಕಳೆದ ಎಂಟು ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಭಾರೀ ನಷ್ಟ ಅನುಭವಿಸಿದ್ದ ಎನ್ನಲಾಗಿದೆ. ಚೀಟಿಗೆ ಹಣ ಹಾಕಿದವರು ಮರುಪಾವತಿ ಒತ್ತಡ ಹಾಕಿದ್ದರಿಂದ, ಕುಟುಂಬಸ್ಥರು ಜಮೀನು ಮಾರಾಟ ಮಾಡಿ ಹಣ ನೀಡಿದ್ದರು. ಆದರೂ ಅದು ಸಾಕಾಗದೆ, ಉಳಿದ ಜಮೀನನ್ನೂ ಮಾರಾಟ ಮಾಡುವಂತೆ ಮುನಿರಾಜು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಇದಕ್ಕೆ ಅಣ್ಣ ರಾಮಕೃಷ್ಣ ವಿರೋಧ ವ್ಯಕ್ತಪಡಿಸಿದ್ದು, ಉಳಿದ ಅಲ್ಪ ಜಮೀನನ್ನು ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದೇ ವಿಚಾರ ಅಣ್ಣ-ತಮ್ಮಂದಿರ ನಡುವೆ ತೀವ್ರ ಮನಸ್ತಾಪಕ್ಕೆ ಕಾರಣವಾಗಿದೆ.

ನಿದ್ರೆಯಲ್ಲಿದ್ದ ಕುಟುಂಬ, ಸಿಸಿಟಿವಿಯಲ್ಲಿ ದೃಶ್ಯ

ಘಟನೆ ವೇಳೆ ರಾಮಕೃಷ್ಣ ಕುಟುಂಬ ಮನೆಯೊಳಗೆ ನಿದ್ರಿಸುತ್ತಿತ್ತು. ಮುನಿರಾಜು ಮನೆಯ ಬಾಗಿಲಿನ ಚಿಲಕ ಹಾಕಿ, ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ನಡೆದ ಅವಘಡ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ.

ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories