ಬೆಂಗಳೂರಿನ ದೇವನಹಳ್ಳಿಯಲ್ಲಿ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ!
ಬೆಂಗಳೂರಿನ (Bengaluru) ದೇವನಹಳ್ಳಿಯಲ್ಲಿ ಮೂರು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಿದ್ದ ಕಾರಿನೊಳಗೆ ಆಂಧ್ರಪ್ರದೇಶ ಮೂಲದ 45 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- ಮೂರು ದಿನಗಳಿಂದ ಒಂದೇ ಕಡೆ ನಿಂತಿದ್ದ ಕಾರು
- ಒಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
- ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ
ದೇವನಹಳ್ಳಿ (Devanahalli): ರಸ್ತೆ ಬದಿಯಲ್ಲಿ ಹಲವು ದಿನಗಳಿಂದ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರಿಗೆ ಒಳಗಿದ್ದ ದೃಶ್ಯ ಆಘಾತ ಉಂಟುಮಾಡಿದೆ. ಕಾರಿನೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿ ಪಟ್ಟಣದ ವಿಜಯಪುರ ಕ್ರಾಸ್ ಬಳಿಯಿರುವ ಯೂನಿಯನ್ ಬ್ಯಾಂಕ್ (Union Bank) ಮುಂದೆ ಈ ಕಾರು ನಿಂತಿತ್ತು. ಸತತ ಮೂರು ದಿನಗಳಿಂದ ಒಂದೇ ಸ್ಥಳದಲ್ಲಿದ್ದ ವೋಕ್ಸ್ವ್ಯಾಗನ್ (Volkswagen) ಕಾರನ್ನು ಸೋಮವಾರ ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕಾರಿನೊಳಗೆ ಮೃತದೇಹ ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಅಮರ್ಚಂದ್ (45) ಎಂದು ಗುರುತಿಸಲಾಗಿದೆ.
ಮದ್ಯದ ಬಾಟಲಿ ಪತ್ತೆ, ಸಾವಿನ ಬಗ್ಗೆ ಅನುಮಾನ
ಕಾರಿನೊಳಗೆ ಮದ್ಯದ ಬಾಟಲಿ ಕೂಡ ಪತ್ತೆಯಾಗಿದೆ. ಅಮರ್ಚಂದ್ ಮದ್ಯ ಸೇವಿಸಿದ ಬಳಿಕ ಕಾರಿನ ಗಾಜುಗಳನ್ನು ಮುಚ್ಚಿಕೊಂಡು ಒಳಗಡೆಯೇ ಮಲಗಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೋಕೋ (SOCO) ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾರಿನೊಳಗಿನ ಪರಿಸ್ಥಿತಿ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.
ಆದರೆ ವ್ಯಕ್ತಿಯ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕವಷ್ಟೇ ಸಾವಿನ ಹಿಂದಿನ ಸಂಪೂರ್ಣ ವಿವರ ತಿಳಿದುಬರಬೇಕಿದೆ.



