ಬೆಂಗಳೂರು ಹೊರಹೊಲಯದ ಆನೇಕಲ್‌ನಲ್ಲಿ ವ್ಯಕ್ತಿಯ ಭೀಕರ ಹತ್ಯೆ
ಆನೇಕಲ್‌ನ ಚಿಕ್ಕಕೆರೆ ಸ್ಟೇಡಿಯಂ ಬಳಿ ಜಂಬೂಸವಾರಿ ವೀಕ್ಷಿಸಲು ಬಂದಿದ್ದ 56 ವರ್ಷದ ಯಲ್ಲಪ್ಪ ಹತ್ಯೆಯಾಗಿದ್ದಾರೆ. ಹಲ್ಲೆ ಬಳಿಕ ಮೊಬೈಲ್, ಎಟಿಎಂ ಕಾರ್ಡ್ ಕೊಂಡೊಯ್ದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು (Bengaluru): ದಸರಾ ಹಬ್ಬದ ಸಂಭ್ರಮದಲ್ಲಿ ಜಂಬೂಸವಾರಿ ನೋಡಲು ಬಂದಿದ್ದ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಘಟನೆ ಆನೇಕಲ್‌ನಲ್ಲಿ (Anekal) ನಡೆದಿದೆ. ಚಿಕ್ಕಕೆರೆ ಸ್ಟೇಡಿಯಂ ಬಳಿ ನಡೆದ ಈ ಘಟನೆಯಲ್ಲಿ 56 ವರ್ಷದ ಯಲ್ಲಪ್ಪ ಮೃತಪಟ್ಟಿದ್ದಾರೆ.
ತಮಿಳುನಾಡಿನ ಸಾರಕ್ಕನಪಲ್ಲಿ ಗ್ರಾಮದವರಾದ ಯಲ್ಲಪ್ಪ, ಹಲವು ವರ್ಷಗಳಿಂದ ತಟ್ನಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ದಸರಾ ಸಂಭ್ರಮ ವೀಕ್ಷಿಸಲು ಆನೇಕಲ್‌ಗೆ ಬಂದಿದ್ದ ಅವರು, ಸಂಜೆ ಪತ್ನಿ ಕಾಂತಮ್ಮಗೆ ಕರೆ ಮಾಡಿ ಜಂಬೂಸವಾರಿ ನೋಡಲು ಬಂದಿರುವುದಾಗಿ ತಿಳಿಸಿದ್ದರು.
ರಾತ್ರಿ ಮದ್ಯಪಾನದ ವೇಳೆ ನಡೆದಿರಬಹುದಾದ ಗಲಾಟೆಯಲ್ಲಿ ಯಲ್ಲಪ್ಪ ಅವರ ತಲೆಗೆ ರಿಪೀಸ್‌ನಿಂದ ಬಲವಾಗಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಮಾಲೀಕರನ್ನು ಯಾಮಾರಿಸಿ ಚಿನ್ನ ಕದ್ದ ಕಳ್ಳ!
ಘಟನೆಯ ಬಳಿಕ ಮೃತರ ಮೊಬೈಲ್‌ನಿಂದಲೇ ತುರ್ತು ಸಹಾಯವಾಣಿ (112)ಗೆ ಕರೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಸಿಬ್ಬಂದಿ ಯಲ್ಲಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆರೋಪಿಗಳು ಮೃತರ ಮೊಬೈಲ್ ಮತ್ತು ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗಿದ್ದು, ಕಾರ್ಡ್ ಬಳಸಿ ಹಣವನ್ನೂ ಡ್ರಾ ಮಾಡಿರುವ ಆರೋಪವಿದೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಬೈಲ್ ಕರೆ ವಿವರಗಳು (CDR), ಸ್ಥಳದ ಮಾಹಿತಿ ಮತ್ತು ಸಿಸಿಟಿವಿ (CCTV) ದೃಶ್ಯಗಳ ಆಧಾರದಲ್ಲಿ ಆನೇಕಲ್ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



