ಬೆಂಗಳೂರು: ಸಾಲ ತೀರಿಸಲು ಕಿಡ್ನ್ಯಾಪ್ ನಾಟಕ! ತಂದೆಗೇ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಮಗ

ಬೆಂಗಳೂರಿನಲ್ಲಿ ಸಾಲದ ಹಣ ತೀರಿಸಲು ಮಗನೇ ತನ್ನ ಅಪಹರಣದ ನಾಟಕವಾಡಿ ತಂದೆಯಿಂದ 90 ಲಕ್ಷ ರೂ. ಪಡೆಯಲು ಯತ್ನಿಸಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಬೆಂಗಳೂರು (Bengaluru), ಅಕ್ಟೋಬರ್ 2: ಸಾಲದ ಹೊರೆ ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನದೇ ಕಿಡ್ನ್ಯಾಪ್ ಆಗಿರುವಂತೆ ನಾಟಕವಾಡಿ ತಂದೆಯಿಂದ ಹಣ ಪಡೆಯಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಕೆಲವೇ ಸಮಯದಲ್ಲಿ ಈ ನಕಲಿ ಅಪಹರಣದ ಕಥೆಯನ್ನು ಬಯಲಿಗೆಳೆದಿದ್ದಾರೆ.

ಮನೀಷ್ ಎಂಬಾತ ಸೆಪ್ಟೆಂಬರ್ 29ರಂದು ಹಣದ ವ್ಯವಹಾರಕ್ಕಾಗಿ ಗದಗಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದ್ದ. ರೈಲಿನಲ್ಲಿ ಹೋಗುವುದಾಗಿ ಹೇಳಿ ಬೆಳಗ್ಗೆ ತಂದೆಗೆ ಕರೆ ಮಾಡುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ಎನ್ನಲಾಗಿದೆ.

ಇದರ ಬೆನ್ನಲ್ಲೇ ಮನೀಷ್ ಮೊಬೈಲ್‌ನಿಂದಲೇ ತಂದೆ ಮನೋಹರ್ ಪಾಟೀಲ್ ಅವರಿಗೆ ವಾಟ್ಸಾಪ್ ಕರೆ (WhatsApp Call) ಬಂದಿತ್ತು. ಕರೆ ಮಾಡಿದವರು ಮನೀಷ್‌ನನ್ನು ಅಪಹರಿಸಿರುವುದಾಗಿ ಹೇಳಿ ಬಿಡುಗಡೆಗಾಗಿ ಬರೋಬ್ಬರಿ 90 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮಗನ ಅಪಹರಣದ ಸುದ್ದಿ ಕೇಳಿ ಆತಂಕಗೊಂಡ ಮನೋಹರ್ ಪಾಟೀಲ್ ಕೂಡಲೇ ಆರ್.ಆರ್. ನಗರ ಪೊಲೀಸರಿಗೆ (RR Nagar Police) ಮಾಹಿತಿ ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿ ಮನೀಷ್‌ನ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಸ್ವಿಚ್ ಆಫ್ ಆಗಿರುವುದು ಪತ್ತೆಯಾಗಿತ್ತು.

ಇದರ ನಡುವೆ ಮತ್ತೊಂದು ನಂಬರ್‌ನಿಂದ ಕರೆ ಮಾಡಿ ಹಣದ ವ್ಯವಸ್ಥೆ ಆಗಿದೆಯೇ ಎಂದು ವಿಚಾರಿಸಲಾಗಿತ್ತು. ಈ ಸಂಖ್ಯೆಯ ಸುಳಿವು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿ ಹಾಸನದ ಕಡೆಗೆ ತೆರಳಿದ್ದರು. ಅಲ್ಲಿ ಪರಿಶೀಲನೆ ನಡೆಸಿದಾಗ ಮನೀಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಯಾವುದೇ ಆತಂಕವಿಲ್ಲದೆ ಮಲಗಿರುವುದು ಕಂಡುಬಂದಿದೆ.

ಮನೀಷ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಹೊರಬಂದಿದೆ. ವಿದ್ಯುತ್ ಗುತ್ತಿಗೆ ಕೆಲಸಕ್ಕೆ ಸಂಬಂಧಿಸಿದಂತೆ ಮನೀಷ್ ಸುಮಾರು 1.5 ಕೋಟಿ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಸಾಲವನ್ನು ತೀರಿಸಲು ತಂದೆಯಿಂದ ದೊಡ್ಡ ಮೊತ್ತದ ಹಣ ಪಡೆಯುವ ಉದ್ದೇಶದಿಂದ ತನ್ನ ಅಪಹರಣದ ನಾಟಕ (Kidnapping Drama) ರೂಪಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಮನೀಷ್ ಹಾಗೂ ಆತನ ಇಬ್ಬರು ಸ್ನೇಹಿತರ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories