ಬೆಂಗಳೂರು: ಪಾಳು ಮನೆಯಲ್ಲಿ ಅಪ್ರಾಪ್ತೆಯ ಕತ್ತುಕೊಯ್ದು ಕೊಲೆ; ಭಾವಿ ಪತಿಯಿಂದಲೇ ಕೃತ್ಯ

ಬೆಂಗಳೂರು ಡಿ.ಜೆ.ಹಳ್ಳಿ ಪ್ರದೇಶದ ಪಾಳು ಮನೆಯಲ್ಲಿ ನಿಶ್ಚಿತಾರ್ಥ ಆಗಿದ್ದ ಅಪ್ರಾಪ್ತೆಯನ್ನು ಭಾವಿ ಪತಿಯೇ ಕತ್ತುಕೊಯ್ದು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಂಗಳೂರು (Bengaluru): ನಗರದಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತೆಯನ್ನು ಆಕೆಯ ಭಾವಿ ಪತಿಯೇ ಕತ್ತುಕೊಯ್ದು ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ. ಈ ಘಟನೆ ಡಿ.ಜೆ.ಹಳ್ಳಿ ಸಕ್ಕರೆ ಮಂಡಿ ಪ್ರದೇಶದ ಪಾಳು ಮನೆಯಲ್ಲಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ಬೆಳಗ್ಗೆ ಸುಮಾರು 6.30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಆದರೆ ಘಟನೆ ಕುರಿತು ಸ್ಪಷ್ಟ ಮಾಹಿತಿ ಪೊಲೀಸರಿಗೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ದೊರೆತಿದೆ. ಆರೋಪಿಯಾಗಿರುವ ಶಬೀಲ್ (20) ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕೊಲೆ ನಡೆದ ಸ್ಥಳವು ಶಬೀಲ್ ಕುಟುಂಬಕ್ಕೆ ಸೇರಿದ ಪಾಳು ಮನೆ ಎಂದು ತಿಳಿದುಬಂದಿದೆ. ಆ ಮನೆಯಲ್ಲಿ ಯಾರೂ ವಾಸವಾಗಿರಲಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಇಬ್ಬರೂ ಅಲ್ಲಿಗೆ ಬರುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಸೋಕೋ ತಂಡ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಸಾಕ್ಷ್ಯ ಸಂಗ್ರಹಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಬಳಿಕವೇ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories