Bengaluru: ನಾಪತ್ತೆಯಾಗಿದ್ದ 14 ವರ್ಷದ ಬೆಂಗಳೂರು ಬಾಲಕ ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆ

ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿಯಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 14 ವರ್ಷದ ಬಾಲಕ ಜಲಮಂಡಳಿಯ ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ

  • ಬೆಂಗಳೂರು ದುರಂತ: ನಾಪತ್ತೆ ಬಾಲಕನ ಶವ ಪತ್ತೆ
  • BWSSB ನಿರ್ಲಕ್ಷ್ಯ: ತೆರೆದ ಸಂಪ್‌ನಲ್ಲಿ ಬಾಲಕ ಸಾವು
  • ಪ್ರಕರಣ ದಾಖಲು, ತನಿಖೆಗೆ ಮುಂದಾದ ಪೊಲೀಸರು

ಬೆಂಗಳೂರು (Bengaluru): ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಶವ ಜಲಮಂಡಳಿ (BWSSB) ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಪತ್ತೆಯಾಗಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ಆಘಾತ ಮೂಡಿಸಿದೆ.

ಮೃತ ಬಾಲಕನನ್ನು ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಅವರ ಪುತ್ರ ಪ್ರೀತಮ್ (14) ಎಂದು ಗುರುತಿಸಲಾಗಿದೆ. ಕುಟುಂಬವು ತಾತಗುಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಪ್ರೀತಮ್ ಕಳೆದ ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೊರಹೋಗಿದ್ದ ಬಳಿಕ ಕಾಣೆಯಾಗಿದ್ದ. ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಪೊಲೀಸರು ಮತ್ತು ಸ್ಥಳೀಯರು ಸೇರಿ ನಿರಂತರ ಹುಡುಕಾಟ ನಡೆಸುತ್ತಿದ್ದರು. ಭಾನುವಾರ BWSSB ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ, ಸಂಪೂರ್ಣವಾಗಿ ಮುಚ್ಚದೇ ಇಡಲಾಗಿದ್ದ ಸಂಪ್‌ನೊಳಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ದೃಶ್ಯ ಕಂಡವರ ಕಣ್ಣಲ್ಲಿ ನೀರು ತುಂಬಿಸಿತು.

ಪ್ರಾಥಮಿಕ ತನಿಖೆಯ ಪ್ರಕಾರ, ತೆರೆದೆಯೇ ಉಳಿದಿದ್ದ ಸಂಪ್‌ ಬಳಿ ಆಟವಾಡುವಾಗ ಅಥವಾ ಓಡಾಡುವ ವೇಳೆ ಬಾಲಕ ಅದರೊಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, BWSSB ನಿರ್ಲಕ್ಷ್ಯದ ಕುರಿತು ಕೂಡ ತನಿಖೆ ಆರಂಭಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories