ಬೆಂಗಳೂರು: ಬಿಕ್ಲು ಶಿವ ಕೊಲೆ ಕೇಸ್, ಶಾಸಕ ಭೈರತಿ ಬಸವರಾಜ್ ಪೊಲೀಸರ ವಶಕ್ಕೆ
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಳಿಕ ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದ ತಕ್ಷಣ ಶಾಸಕ ಭೈರತಿ ಬಸವರಾಜ್ ಅವರನ್ನು ದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದು ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ.

- ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಶಾಸಕ ಭೈರತಿ ಬಸವರಾಜ್ ವಶಕ್ಕೆ
- ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ತಿರಸ್ಕಾರ ಬಳಿಕ ಕ್ರಮ
- ದೇವನಹಳ್ಳಿ ಪೊಲೀಸರು ಏರ್‌ಪೋರ್ಟ್‌ನಲ್ಲೇ ವಶಕ್ಕೆ
ಬೆಂಗಳೂರು (Bengaluru): ಬಹುಚರ್ಚಿತ ಬಿಕ್ಲು ಶಿವ ಕೊಲೆ ಪ್ರಕರಣ ಮತ್ತೊಮ್ಮೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿಬಂದಿದ್ದ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ದೇವನಹಳ್ಳಿ ಪೊಲೀಸರು ಕೊನೆಗೂ ವಶಕ್ಕೆ ಪಡೆದಿದ್ದಾರೆ. ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ ಈ ಕ್ರಮ ಜರುಗಿರುವುದು ಗಮನಾರ್ಹ.
ಬಂಧನ ಭೀತಿಯಿಂದ ಕೆಲ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇದ್ದ ಭೈರತಿ ಬಸವರಾಜ್, ಅಹಮದಾಬಾದ್‌ನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ದೇವನಹಳ್ಳಿ ಎಸಿಪಿ ನೇತೃತ್ವದ ಪೊಲೀಸ್ ತಂಡ ಅವರನ್ನು ವಶಕ್ಕೆ ಪಡೆದುಕೊಂಡಿತು. ಈ ಬೆಳವಣಿಗೆ ಏರ್‌ಪೋರ್ಟ್‌ನಲ್ಲೇ ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.
ಪೊಲೀಸರು ಅವರನ್ನು ನೇರವಾಗಿ ಸಿಐಡಿ ಕಚೇರಿಗೆ ಕರೆದೊಯ್ಯಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ತನಿಖೆಗಾಗಿ ರಿಮ್ಯಾಂಡ್ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ
ಕಿತ್ತಗನೂರು ಪ್ರದೇಶದ ಜಮೀನು ವಿವಾದವೇ ಈ ಹತ್ಯೆಗೆ ಕಾರಣ ಎನ್ನಲಾಗಿದೆ. ಕಳೆದ ವರ್ಷದ ಜುಲೈ 15ರಂದು ದುಷ್ಕರ್ಮಿಗಳು ಮಾಜಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಮೇಲೆ ಮಚ್ಚು, ಲಾಂಗ್‌ಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ಘಟನೆ ನಂತರ ಮೃತನ ಕುಟುಂಬದವರು ಹಲವು ಮಂದಿಯ ವಿರುದ್ಧ ದೂರು ದಾಖಲಿಸಿದ್ದರು.
ಶಾಸಕ ಭೈರತಿ ಬಸವರಾಜ್ ಕೈವಾಡವಿದೆ ಎಂಬ ಆರೋಪದ ಮೇಲೆ FIR ದಾಖಲಿಸಲಾಗಿದ್ದು, ಆರೋಪಿಗಳ ಪಟ್ಟಿಯಲ್ಲಿ A5 ಆಗಿ ಹೆಸರು ಸೇರಿಸಲಾಗಿದೆ. ಇದೀಗ ಸುಪ್ರೀಂಕೋರ್ಟ್ ತೀರ್ಪು ಹಾಗೂ ಪೊಲೀಸರ ಕ್ರಮದಿಂದ ಪ್ರಕರಣ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದೆ.
ಈ ಬೆಳವಣಿಗೆ ರಾಜಕೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ತನಿಖೆಯೇ ಸತ್ಯಾಸತ್ಯತೆ ಹೊರತರುವ ನಿರೀಕ್ಷೆ ಇದೆ.



