Bengaluru AQI: ಬೆಂಗಳೂರು ಏರ್ ಕ್ವಾಲಿಟಿ ಸುಧಾರಣೆ! ಈಗ ಮೈಸೂರು–ಶಿವಮೊಗ್ಗ ಗಾಳಿ ಗುಣಮಟ್ಟ ಕಳಪೆ
ಇಂದು ಬೆಂಗಳೂರು ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸಿದರೂ ಮೈಸೂರು ಮತ್ತು ಶಿವಮೊಗ್ಗದಲ್ಲಿ ಮಾಲಿನ್ಯ ಮಟ್ಟ ಏರಿಕೆಯಾಗಿದ್ದು ವಾಹನ ಹೊಗೆ ನಿರ್ಮಾಣ ಧೂಳು ಮತ್ತು ಗಾಳಿಚಲನೆ ಕಡಿಮೆ ಇರುವುದೇ ಮುಖ್ಯ ಕಾರಣ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ
- ಬೆಂಗಳೂರು ಏರ್ ಕ್ವಾಲಿಟಿ ಮಧ್ಯಮ ಮಟ್ಟಕ್ಕೆ ಸುಧಾರಣೆ
- ಮೈಸೂರು–ಶಿವಮೊಗ್ಗ ಗಾಳಿಯ ಗುಣಮಟ್ಟ ಕಳಪೆ
- ವಾಯುಮಾಲಿನ್ಯ ಎಚ್ಚರಿಕೆ ಮಕ್ಕಳ, ಹಿರಿಯರಿಗೆ ಅಪಾಯ
Bengaluru Air Quality: ಇಷ್ಟು ದಿನ ಕಳಪೆ ಗಾಳಿಯಿಂದ ಸುದ್ದಿಯಾಗುತ್ತಿದ್ದ ಬೆಂಗಳೂರು ಇಂದು ತುಸು ಸುಧಾರಿಸಿದೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಮೈಸೂರು ಮತ್ತು ಶಿವಮೊಗ್ಗ (Mysuru, Shivamogga) ನಗರಗಳ ವಾಯು ಗುಣಮಟ್ಟ ಸೂಚ್ಯಂಕ ಬೆಂಗಳೂರನ್ನೂ ಮೀರಿಸಿ ಹದಗೆಟ್ಟಿದೆ. ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹೊಸ ಚಿಂತೆಗೆ ಕಾರಣವಾಗಿದೆ.
ಎಲ್ಲಿ ಎಷ್ಟು ಮಾಲಿನ್ಯ?
ಇಂದಿನ ಅಂಕಿಅಂಶಗಳ ಪ್ರಕಾರ ಬೆಂಗಳೂರು AQI 154 ಇದ್ದರೆ, ಮೈಸೂರು ಮತ್ತು ಶಿವಮೊಗ್ಗದಲ್ಲಿ 172 ದಾಖಲಾಗಿದೆ. ಕೆಲವು ದಿನಗಳ ಹಿಂದಷ್ಟೇ ನೂರಿನೊಳಗಿದ್ದ ಈ ನಗರಗಳ ಗಾಳಿಯ ಗುಣಮಟ್ಟ ಏಕಾಏಕಿ ಕುಸಿದಿರುವುದು ತಜ್ಞರ ಗಮನ ಸೆಳೆದಿದೆ. ಬಳ್ಳಾರಿಯಲ್ಲಿ 181 ತಲುಪಿರುವುದು ಇನ್ನಷ್ಟು ಆತಂಕ ಮೂಡಿಸಿದೆ.
ಏಕೆ ಹದಗೆಟ್ಟಿತು ಗಾಳಿ?
ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ, ನಿರಂತರ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳು ಮತ್ತು ಗಾಳಿಯ ಚಲನೆ ಕಡಿಮೆಯಾಗಿರುವುದು ಮಾಲಿನ್ಯ ಕಣಗಳು ವಾತಾವರಣದಲ್ಲೇ ಸಿಲುಕಿಕೊಳ್ಳಲು ಕಾರಣವಾಗಿವೆ. ಈ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ
ಇಂದು ಬೆಂಗಳೂರಿನಲ್ಲಿ PM2.5 – 62 ಮತ್ತು PM10 – 85 ದಾಖಲಾಗಿದೆ. PM2.5 ಅತಿ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶ ಹಾಗೂ ರಕ್ತಕ್ಕೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಅಸ್ತಮಾ, ಹೃದಯ ಸಮಸ್ಯೆ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಈ ಪರಿಣಾಮ ಹೆಚ್ಚು.
ಸಾರ್ವಜನಿಕರಿಗೆ ಸಲಹೆ
ಮಾಲಿನ್ಯ ಹೆಚ್ಚಿರುವ ದಿನಗಳಲ್ಲಿ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಪೀಕ್ ಟ್ರಾಫಿಕ್ ಸಮಯ ತಪ್ಪಿಸುವುದು ಉತ್ತಮ. ಮನೆ ಸುತ್ತ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಅಗತ್ಯವಿಲ್ಲದೆ ಹೊರಗಡೆ ತಿರುಗಾಡದಿರುವುದು ಆರೋಗ್ಯ ರಕ್ಷಣೆಗೆ ಸಹಕಾರಿ.
ಇಂದಿನ ಗಾಳಿಯ ಗುಣಮಟ್ಟ (AQI)
- ಬೆಂಗಳೂರು – 154
- ಮೈಸೂರು – 172
- ಶಿವಮೊಗ್ಗ – 172
- ಮಂಗಳೂರು – 153
- ಬಳ್ಳಾರಿ – 181
- ಹುಬ್ಬಳ್ಳಿ – 75
- ಉಡುಪಿ – 139
- ಬೆಳಗಾವಿ – 101
- ವಿಜಯಪುರ – 107
- ಕಲಬುರ್ಗಿ – 88



