Bengaluru: ಬೆಂಗಳೂರು ಹೊಸಕೋಟೆಗೆ ಮೆಟ್ರೋ ವಿಸ್ತರಣೆ; ಡಬಲ್ ಡೆಕ್ಕರ್ ಫ್ಲೈಓವರ್ ಪ್ಲ್ಯಾನ್ ಹೀಗಿದೆ
2030ರ ಗುರಿಯತ್ತ ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಕೆಆರ್ ಪುರದಿಂದ ಹೊಸಕೋಟೆವರೆಗೆ ವಿಸ್ತರಿಸುವ ಯೋಜನೆಗೆ ಡಬಲ್ ಡೆಕ್ಕರ್ ಫ್ಲೈಓವರ್ ಸೇರಿಸುವ ಕಾರ್ಯಸಾಧ್ಯತಾ ವರದಿ ನಗರ ಸಂಚಾರಕ್ಕೆ ಹೊಸ ದಿಕ್ಕು ಸೂಚಿಸುತ್ತದೆ

- ಹೊಸಕೋಟೆ ಮೆಟ್ರೋ ವಿಸ್ತರಣೆ ಪ್ರಸ್ತಾವ
- ಡಬಲ್ ಡೆಕ್ಕರ್ ಫ್ಲೈಓವರ್: ಮೆಟ್ರೋ–ರಸ್ತೆ ಒಟ್ಟಿಗೆ ಸಂಚಾರ
- ನಮ್ಮ ಮೆಟ್ರೋ 2030: ಒಟ್ಟು 220 ಕಿಮೀ ಜಾಲದ ಗುರಿ
ಬೆಂಗಳೂರು (Bengaluru): ಬೆಂಗಳೂರು ನಗರ ವಿಸ್ತರಣೆಯ ಜೊತೆಗೆ ಸಾರ್ವಜನಿಕ ಸಾರಿಗೆಯ ಮೇಲಿನ ಒತ್ತಡವೂ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಹೊಸಕೋಟೆವರೆಗೆ ವಿಸ್ತರಿಸುವ (Namma Metro Extension to Hoskote) ಮಹತ್ವದ ಯೋಜನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಕಾರ್ಯಸಾಧ್ಯತಾ ವರದಿಯ ಪ್ರಕಾರ, ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಮಾಡುವ ಸಾಧ್ಯತೆಯಿದೆ.
ಕೆಆರ್ ಪುರದಿಂದ ಹೊಸಕೋಟೆವರೆಗೆ ವಿಸ್ತರಣೆ
ಹಾಲಿ ಯೋಜನೆಯಂತೆ, ಮೆಟ್ರೋ ವಿಸ್ತರಣೆಯನ್ನು ವೈಟ್ಫಿಲ್ಡ್ನಿಂದಲ್ಲ (Whitefield) , ಕೆಆರ್ ಪುರದಿಂದ (KR Puram) ಆರಂಭಿಸುವ ಬಗ್ಗೆ ಬಿಎಂಆರ್ಸಿಎಲ್ ಆಸಕ್ತಿ ತೋರಿದೆ. ದೆಹಲಿ ಮೂಲದ ಸಲಹಾ ಸಂಸ್ಥೆಯೊಂದು ಸಿದ್ಧಪಡಿಸಿದ ಕಾರ್ಯಸಾಧ್ಯತಾ ವರದಿಯಲ್ಲಿ, ಸುಮಾರು 16 ಕಿಲೋ ಮೀಟರ್ ಉದ್ದದ ಮಾರ್ಗವನ್ನು ತಾಂತ್ರಿಕವಾಗಿ ಅನುಷ್ಠಾನಗೊಳಿಸಬಹುದು ಎಂದು ತಿಳಿಸಲಾಗಿದೆ.
10 ನಿಲ್ದಾಣಗಳ ಪ್ರಸ್ತಾವನೆ
ಪ್ರಸ್ತಾವಿತ ಕೆಆರ್ ಪುರ–ಹೊಸಕೋಟೆ (KR Puram to Hoskote) ಮಾರ್ಗದಲ್ಲಿ ಒಟ್ಟು 10 ಮೆಟ್ರೋ ನಿಲ್ದಾಣಗಳು ಇರಬಹುದೆಂದು ವರದಿ ಸೂಚಿಸುತ್ತದೆ. ಐಟಿಐ ಭವನ, ಟಿಸಿ ಪಾಳ್ಯ ಗೇಟ್, ಬಟ್ಟರಹಳ್ಳಿ, ಮೇಡಹಳ್ಳಿ, ಆವಲಹಳ್ಳಿ, ಬೂದಿಗೆರೆ ಕ್ರಾಸ್, ಕಾಟಂನಲ್ಲೂರು ಗೇಟ್, ಹೊಸಕೋಟೆ ಟೋಲ್ ಪ್ಲಾಜಾ, ಕೆಇಬಿ ವೃತ್ತ ಹಾಗೂ ಹೊಸಕೋಟೆ ಸರ್ಕಾರಿ ಆಸ್ಪತ್ರೆ ಪ್ರಮುಖ ನಿಲ್ದಾಣಗಳಾಗುವ ಸಾಧ್ಯತೆ ಇದೆ.
ಡಿಪಿಆರ್ಗೆ ಸಿದ್ಧತೆ
ಈ ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ, ಸಮಗ್ರ ಯೋಜನಾ ವರದಿ (DPR) ತಯಾರಿಸಲು ಬಿಎಂಆರ್ಸಿಎಲ್ ಮುಂದಾಗಲಿದೆ. ಡಿಪಿಆರ್ ಪೂರ್ಣಗೊಂಡ ನಂತರವೇ ಸರ್ಕಾರದ ಅನುಮೋದನೆ ಮತ್ತು ಹಣಕಾಸು ವ್ಯವಸ್ಥೆ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಹೊಸಕೋಟೆಗೆ ಸಿಗುವ ಲಾಭಗಳು
ಯೋಜನೆ ಜಾರಿಗೆ ಬಂದರೆ, ಹೊಸಕೋಟೆ (Hoskote) ನಿವಾಸಿಗಳಿಗೆ ನಗರ ಪ್ರವೇಶ ಸುಲಭವಾಗಲಿದೆ. ಟ್ರಾಫಿಕ್ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಲ, ಬಾಡಿಗೆ ದರ ಏರಿಕೆ ಮತ್ತು ವ್ಯಾಪಾರ ಚಟುವಟಿಕೆಗಳ ವಿಸ್ತರಣೆ ಸಾಧ್ಯತೆ ಇದೆ. ವೇಗದ, ಸುರಕ್ಷಿತ ಸಾರ್ವಜನಿಕ ಸಾರಿಗೆಯ ಲಾಭ ನೇರವಾಗಿ ಜನರಿಗೆ ತಲುಪಲಿದೆ.



