ಬೆಂಗಳೂರು ಪಾಸ್‌ಪೋರ್ಟ್ ವೆರಿಫಿಕೇಶನ್ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿ ಜಾರಿಗೆ ಬಂದಿದೆ. ಬಾಡಿ ವೋರ್ನ್ ಕ್ಯಾಮೆರಾ ಕಡ್ಡಾಯವಾಗಿದ್ದು, ಅರ್ಜಿದಾರರ ಮನೆಗೆ ಭೇಟಿ ನೀಡಲೇಬೇಕು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

- ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಬಾಡಿ ಕ್ಯಾಮೆರಾ ಕಡ್ಡಾಯ
- ಬೆಂಗಳೂರಿನಲ್ಲಿ ಅರ್ಜಿದಾರರನ್ನು ಠಾಣೆಗೆ ಕರೆಸಲು ನಿಷೇಧ
- ಹೊಸ ನಿಯಮ ಪಾಲಿಸದ ಅಧಿಕಾರಿಗಳಿಗೆ ಶಿಸ್ತು ಕ್ರಮ
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್ (Passport Verification) ಪ್ರಕ್ರಿಯೆ ಇನ್ನಷ್ಟು ಪಾರದರ್ಶಕವಾಗಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಡಿಜಿ ಮತ್ತು ಐಜಿಪಿ ಸೂಚನೆಯಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅವು ತಕ್ಷಣದಿಂದಲೇ ಅನ್ವಯವಾಗಲಿವೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ಪರಿಶೀಲನೆ ನಡೆಸುವ ಅಧಿಕಾರಿಗಳು ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು. ಇದರಿಂದ ಪರಿಶೀಲನಾ ಪ್ರಕ್ರಿಯೆ ದಾಖಲಾಗುವ ಮೂಲಕ ಪಾರದರ್ಶಕತೆ ಹೆಚ್ಚಲಿದೆ. ಯಾವುದೇ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಬಾರದು. ಬದಲಿಗೆ, ಅಧಿಕಾರಿಗಳು ಸ್ವತಃ ಅರ್ಜಿದಾರರು ನೀಡಿರುವ ವಿಳಾಸಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು.
ಅರ್ಜಿದಾರರಿಗೆ ಮುಂಚಿತ ಮಾಹಿತಿ ಕಡ್ಡಾಯ
ಅರ್ಜಿದಾರರ ಮನೆಗೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್‌ಎಂಎಸ್ ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡಬೇಕು. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ನೆರೆಹೊರೆಯವರಿಂದಲೂ ಅಗತ್ಯ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಇದರಿಂದ ವಿಳಾಸದ ದೃಢೀಕರಣ ಪ್ರಕ್ರಿಯೆ ಹೆಚ್ಚು ಸಮಗ್ರವಾಗಲಿದೆ.
ಇನ್ನೊಂದೆಡೆ, ಯಾವುದೇ ರೀತಿಯ ಲಂಚ ಅಥವಾ ಆಮಿಷವನ್ನು ನಿರೀಕ್ಷಿಸುವುದಕ್ಕೂ, ಅರ್ಜಿದಾರರಿಗೆ ಕಿರುಕುಳ ನೀಡುವುದಕ್ಕೂ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ. ಅನಗತ್ಯವಾಗಿ ಅರ್ಜಿದಾರರನ್ನು ಅಲೆದಾಡಿಸುವುದು ಅಥವಾ ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡುವಂತಿಲ್ಲ. ಪ್ರತಿಕೂಲ ವರದಿ ನೀಡಬೇಕಾದರೆ ಸ್ಪಷ್ಟ ಪುರಾವೆಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ.
ಈ ನಿಯಮಗಳು ಸರಿಯಾಗಿ ಜಾರಿಗೆ ಬರುತ್ತಿವೆಯೇ ಎಂಬುದನ್ನು ಡಿಸಿಪಿ ವಾರಕ್ಕೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸಬೇಕು. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಪಾಸ್‌ಪೋರ್ಟ್ ಪಡೆಯುವ ನಾಗರಿಕರಿಗೆ ಸುಗಮ ಮತ್ತು ಭ್ರಷ್ಟಾಚಾರರಹಿತ ಸೇವೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.



