ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ! ಪತ್ನಿಯ ಕಣ್ಣೆದುರೇ ನವವಿವಾಹಿತ ಸಾವು
ನೆಲಮಂಗಲದಲ್ಲಿ ಪತ್ನಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ 25 ವರ್ಷದ ನವವಿವಾಹಿತನಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಚಿಕಿತ್ಸೆಗಾಗಿ ಕರೆದೊಯ್ಯುವಷ್ಟರಲ್ಲಿ ದುರಂತ ಅಂತ್ಯ ಕಂಡಿದೆ.

ಬೆಂಗಳೂರು / ನೆಲಮಂಗಲ (Nelamangala): ಪತ್ನಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ನವವಿವಾಹಿತನೊಬ್ಬನ ಬದುಕು ಕ್ಷಣಾರ್ಧದಲ್ಲಿ ದುರಂತವಾಗಿ ಅಂತ್ಯಗೊಂಡ ಘಟನೆ ನೆಲಮಂಗಲ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಬಸ್ (BMTC Bus) ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಮನುಗೌಡ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಮೂಲದ ಮನುಗೌಡ, ಬೆಂಗಳೂರಿನ ಉತ್ತರ ತಾಲೂಕಿನ ಹುಲ್ಲೇಗೌಡನಹಳ್ಳಿಯಲ್ಲಿ ವಾಸವಾಗಿದ್ದರು. ನೆಲಮಂಗಲದ ಸೋಲೂರು ಮೂಲದ ಮಮತಾ ಅವರನ್ನು ಪ್ರೀತಿಸಿ ಕೇವಲ ಎಂಟು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.
ಪತ್ನಿ ಮಮತಾ ಅವರೊಂದಿಗೆ ಬೈಕ್‌ನಲ್ಲಿ ನೆಲಮಂಗಲದತ್ತ ಬರುತ್ತಿದ್ದ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ (Road Accident) ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಮನುಗೌಡ ಬೈಕ್‌ನಿಂದ ರಸ್ತೆಗೆ ಬಿದ್ದಿದ್ದು, ಬಳಿಕ ಬಸ್‌ನ ಚಕ್ರ ಅವರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪತಿಯನ್ನು ಉಳಿಸಿಕೊಳ್ಳಲು ಮಮತಾ ಸ್ಥಳೀಯರ ನೆರವು ಪಡೆದಿದ್ದಾರೆ. ಕೂಡಲೇ ಆಸ್ಪತ್ರೆಗೆ (Hospital) ಕರೆದೊಯ್ಯುವ ಪ್ರಯತ್ನ ನಡೆದರೂ, ಅವರ ಕಣ್ಣೆದುರೇ ಮನುಗೌಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮದುವೆಯಾಗಿ ಕೇವಲ ಎಂಟು ತಿಂಗಳಾಗಿದ್ದ ಸಂದರ್ಭದಲ್ಲೇ ಪತಿಯನ್ನು ಕಳೆದುಕೊಂಡಿರುವ ಮಮತಾ ಅವರ ಸ್ಥಿತಿ ಮನಕಲಕುವಂತಾಗಿದೆ. ಕುಟುಂಬದ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಮನೆಯೊಂದರಲ್ಲಿ ಇದೀಗ ಸಾವಿನ ಸುದ್ದಿ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಹಾಗೂ ಬಸ್ ಚಾಲಕನ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.



