ಕೆಆರ್ ಪುರಂ-ವೈಟ್‌ಫೀಲ್ಡ್ ನಡುವೆ ಮೆಟ್ರೋ ರೈಲು ಉದ್ಘಾಟನೆ; 25 ರಂದು ಪ್ರಧಾನಿ ಮೋದಿ ಕರ್ನಾಟಕ ಭೇಟಿ
ಕೆಆರ್ ಪುರಂ-ವೈಟ್‌ಫೀಲ್ಡ್ ನಡುವಿನ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಇದೇ 25 ರಂದು ಬೆಂಗಳೂರಿಗೆ ಬರಲಿದ್ದಾರೆ. ಅವರ ಭೇಟಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.
ಬೆಂಗಳೂರು (Bengaluru): ಕೆಆರ್ ಪುರಂ-ವೈಟ್‌ಫೀಲ್ಡ್ (KR Puram – Whitefield) ನಡುವಿನ ಮೆಟ್ರೋ ರೈಲು ಸೇವೆಯನ್ನು (Metro Rail Service) ಉದ್ಘಾಟಿಸಲು (inauguration) ಪ್ರಧಾನಿ ಮೋದಿ (PM Narendra Modi) ಇದೇ 25 ರಂದು ಬೆಂಗಳೂರಿಗೆ (Bangalore) ಬರಲಿದ್ದಾರೆ. ಅವರ ಭೇಟಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.
ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿ ಮುಂದಿನ ಮೇ ತಿಂಗಳಿಗೆ ಮುಕ್ತಾಯವಾಗಲಿದೆ. ಇದರಿಂದಾಗಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ತಿಂಗಳಾಂತ್ಯಕ್ಕೆ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿವೆ. ಮೂರೂ ಪಕ್ಷಗಳು ಯಾತ್ರೆ ಹೆಸರಲ್ಲಿ ಪ್ರವಾಸ ಮಾಡಿ ಜನಬೆಂಬಲ ಪಡೆಯಲು ಹವಣಿಸುತ್ತಿವೆ. ಜನತಾದಳ (ಎಸ್) ಈಗಾಗಲೇ 93 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕಾಂಗ್ರೆಸ್ ಕೂಡ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯ ನಿಮಿತ್ತ ಕಳೆದ ಜನವರಿಯಿಂದ ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕಕ್ಕೆ ಇದುವರೆಗೆ 6 ಬಾರಿ ಭೇಟಿ ನೀಡಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲೂ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ, ಧಾರವಾಡ ಐ.ಐ.ಟಿ. ಕ್ಯಾಂಪಸ್ ಸೇರಿದಂತೆ ನಾನಾ ಯೋಜನೆಗಳನ್ನು ಆರಂಭಿಸಿದ್ದಾರೆ.
ಪ್ರಧಾನಿ ಮೋದಿ ಚಿಕ್ಕಬಳ್ಳಾಪುರ ಭೇಟಿ
25ರಂದು 7ನೇ ಬಾರಿಗೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅಂದು ಬೆಳಗ್ಗೆ ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಬರಲಿದ್ದು, ಎಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತದೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು ಉದ್ಘಾಟನೆ ಮಾಡಲಿದ್ದಾರೆ.
ಕೆಆರ್ ಪುರಂ ವೈಟ್‌ಫೀಲ್ಡ್ ಮೆಟ್ರೊ ರೈಲು ಸೇವೆ ಉದ್ಘಾಟ
ಕಾರ್ಯಕ್ರಮ ಮುಗಿಸಿ ಮತ್ತೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಬರಲಿದ್ದು, ಕೆಆರ್ ಪುರಂ-ವೈಟ್ ಫೀಲ್ಡ್ (KR Puram – Whitefield Metro) ನಡುವೆ ಸುಮಾರು 13 ಕಿ.ಮೀ ದೂರದ ಮೆಟ್ರೊ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ. ಆ ಬಳಿಕ ಪ್ರಧಾನಿ ಮೋದಿ ದಾವಣಗೆರೆಗೆ ತೆರಳಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್
ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿ ವಿಮಾನದ ಮೂಲಕ ದೆಹಲಿಗೆ ತೆರಳುತ್ತಾರೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಹುಶಃ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನ ಕರ್ನಾಟಕಕ್ಕೆ ಇದು ಅವರ ಕೊನೆಯ ಭೇಟಿಯಾಗಲಿದೆ ಎನ್ನಲಾಗಿದೆ. ಅದಾದ ನಂತರ ಪ್ರತಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ ಎಂಬ ವರದಿಗಳಿವೆ. 30ಕ್ಕೂ ಹೆಚ್ಚು ಪ್ರಚಾರ ಸಭೆಗಳಲ್ಲಿ ಮೋದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕ ವಿಧಾನಸಭೆಯಲ್ಲಿ ಏಕ ಬಹುಮತ ಪಡೆದು ಸರ್ಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಬಿಜೆಪಿ ಶ್ರಮಿಸುತ್ತಿದೆ. ಜನರಲ್ಲಿ ಪ್ರಧಾನಿ ಮೋದಿ ಅವರ ವರ್ಚಸ್ಸು ಅವರಿಗೆ ನೆರವಾಗಲಿದೆ ಎಂದು ಕರ್ನಾಟಕ ಬಿಜೆಪಿ ನಾಯಕರು ನಂಬಿದ್ದಾರೆ.
PM Modi to visit Karnataka Bengaluru on 25th for Inauguration of Metro Rail between KR Puram Whitefield