ಪಿಒಪಿ ಗಣೇಶ ಮಾರಾಟ, ತಯಾರಿಕೆ ಸಂಪೂರ್ಣ ನಿಷೇಧ! ನಿಗದಿತ ಸ್ಥಳದಲ್ಲೇ ವಿಸರ್ಜನೆ ಮಾಡಬೇಕು

ಗಣೇಶ ಹಬ್ಬದ ಹಿನ್ನೆಲೆ ಜಿಬಿಎ ಕಠಿಣ ನಿಯಮ ಜಾರಿಗೊಳಿಸಿದ್ದು, ಪಿಒಪಿ ಮೂರ್ತಿ ತಯಾರಿಕೆ ಮತ್ತು ಮಾರಾಟ ನಿಷೇಧಿಸಿದೆ. ನಿಗದಿತ ಸ್ಥಳ ಹೊರತುಪಡಿಸಿ ವಿಸರ್ಜನೆ ಮಾಡಿದರೂ ಕ್ರಿಮಿನಲ್ ಕೇಸ್ ಎದುರಾಗಲಿದೆ.

ಬೆಂಗಳೂರು (Bengaluru): ಗಣೇಶ ಹಬ್ಬಕ್ಕೆ (Ganesha Festival) ಸಿದ್ಧತೆಗಳು ಆರಂಭವಾಗಿರುವ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಾರ್ವಜನಿಕರಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಪರಿಸರ ಸಂರಕ್ಷಣೆ ಹಾಗೂ ಹಬ್ಬದ ವೇಳೆ ನಿಯಮ ಪಾಲನೆಗೆ ಒತ್ತು ನೀಡಿರುವ ಜಿಬಿಎ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ವಿಶೇಷವಾಗಿ ಪಿಒಪಿ ಗಣೇಶ (POP Ganesh) ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಸಂಪೂರ್ಣ ನಿಷೇಧವಿದೆ. ಯಾರಾದರೂ ನಿಯಮ ಮೀರಿ ಪಿಒಪಿ ಮೂರ್ತಿಗಳನ್ನು ತಯಾರಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ (Criminal Case) ದಾಖಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನೂ ಜಿಬಿಎ ಸರಳಗೊಳಿಸಿದೆ. ಆಯೋಜಕರಿಗೆ ಅನುಕೂಲವಾಗುವಂತೆ ವಾರ್ಡ್‌ವಾರು ನೋಡಲ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅರ್ಜಿ ಸಲ್ಲಿಸಿದ ದಿನವೇ ಪರಿಶೀಲನೆ ನಡೆಸಿ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಿಂಗಲ್ ವಿಂಡೋ (Single Window) ಮೂಲಕ ಅರ್ಜಿ ವಿಲೇವಾರಿಗೆ ಅವಕಾಶ ಕಲ್ಪಿಸಲಾಗಿದೆ.

ಮೂರ್ತಿ ವಿಸರ್ಜನೆ ವಿಚಾರದಲ್ಲೂ ಜಿಬಿಎ ಸ್ಪಷ್ಟ ನಿಯಮ ರೂಪಿಸಿದೆ. ಪ್ರಾಧಿಕಾರ ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ನಿಗದಿತ ಜಾಗವನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ವಿಸರ್ಜನೆ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಖಡಕ್ ಎಚ್ಚರಿಕೆ ನೀಡಲಾಗಿದೆ.

ಮನೆಯಲ್ಲೇ ಗಣೇಶ ಮೂರ್ತಿ ವಿಸರ್ಜಿಸುವವರಿಗೆ ಉಳಿಯುವ ಮಣ್ಣನ್ನು ಹೊರಗೆ ಎಸೆಯದಂತೆ ಸೂಚಿಸಲಾಗಿದೆ. ಆ ಮಣ್ಣನ್ನು ಮನೆಯ ಹೂಕುಂಡ ಅಥವಾ ಕೈತೋಟಗಳಲ್ಲಿ ಮರುಬಳಕೆ ಮಾಡುವಂತೆ ಜಿಬಿಎ ಮನವಿ ಮಾಡಿದೆ.

ಇದರ ಜೊತೆಗೆ ಗಣೇಶ ಹಬ್ಬದ ಆಚರಣೆಯಲ್ಲಿ ಪ್ಲಾಸ್ಟಿಕ್ ಬಳಕೆಗೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆಯೋಜಕರು ಪ್ಲಾಸ್ಟಿಕ್ ಬಳಸುವುದು ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಹಬ್ಬದ ಆಯೋಜಕರು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಪೆಂಡಾಲ್ ಅಳವಡಿಕೆ ಮತ್ತು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದ ಶುಲ್ಕ ಪಾವತಿಸುವುದೂ ಕಡ್ಡಾಯವಾಗಿದೆ. ಸ್ಥಳೀಯ ಪೊಲೀಸ್ ಠಾಣೆ ಅಥವಾ ಬೆಂಗಳೂರು ಒನ್ (Bangalore One) ಕೇಂದ್ರದಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಯ ರಸೀದಿಯನ್ನು ಅರ್ಜಿಯೊಂದಿಗೆ ಸಲ್ಲಿಸಿದ ಬಳಿಕವೇ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಲಾಗುತ್ತದೆ ಎಂದು ಜಿಬಿಎ ಸುತ್ತೋಲೆಯಲ್ಲಿ ತಿಳಿಸಿದೆ.

ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಗಣೇಶ ಹಬ್ಬ ಆಚರಿಸುವ ಆಯೋಜಕರು ಅನುಮತಿ, ವಿಸರ್ಜನೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಎಲ್ಲ ನಿಯಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಮಾತ್ರವಲ್ಲದೆ ಕ್ರಿಮಿನಲ್ ಪ್ರಕರಣವನ್ನೂ ಎದುರಿಸಬೇಕಾಗಬಹುದು.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories