ಬೆಂಗಳೂರು: ಬಡ್ತಿ ವಿವಾದ, ವಿದ್ಯಾರ್ಥಿಗಳ ಎದುರೇ ಪ್ರಿನ್ಸಿಪಾಲ್–ಶಿಕ್ಷಕಿ ಬಡಿದಾಟ

ಬೆಂಗಳೂರು ಬಸವನಗುಡಿ ಖಾಸಗಿ ಶಾಲೆಯಲ್ಲಿ ಬಡ್ತಿ ವಿಚಾರದಿಂದ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ನಡುವೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಗಲಾಟೆ ನಡೆದಿದ್ದು, ಪ್ರಕರಣ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಬೆಂಗಳೂರು (Bengaluru) : ನಗರದ ಬಸವನಗುಡಿ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಶಿಸ್ತು ಮತ್ತು ಸಂಸ್ಕಾರ ಕಲಿಸಬೇಕಾದ ಶಿಕ್ಷಣ ಸಂಸ್ಥೆಯಲ್ಲೇ ಶಿಕ್ಷಕರಿಬ್ಬರು ವಿದ್ಯಾರ್ಥಿಗಳ ಎದುರು ಮಾತಿನ ಚಕಮಕಿ ನಡೆಸಿಕೊಂಡಿದ್ದು, ಅದು ಹೊಡೆದಾಟದ ಮಟ್ಟಕ್ಕೂ ತಲುಪಿದೆಯೆಂದು ತಿಳಿದುಬಂದಿದೆ.

ಮಾಹಿತಿಯಂತೆ, ಶಿಕ್ಷಕಿ ರೇಷ್ಮಾ ಅವರ ಕಾರ್ಯವೈಖರಿಯನ್ನು ಮೆಚ್ಚಿದ ಆಡಳಿತ ಮಂಡಳಿ ಅವರಿಗೆ ಬಡ್ತಿ ನೀಡಿ ಪ್ರಶಂಸನಾ ಪತ್ರ ನೀಡಿತ್ತು. ಈ ನಿರ್ಧಾರವು ಶಾಲೆಯ ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಅವರಿಗೆ ಅಸಮಾಧಾನ ಉಂಟುಮಾಡಿದಂತಾಗಿದೆ. ಇದೇ ವಿಚಾರವಾಗಿ ನಡೆದ ಮಾತಿನ ಚರ್ಚೆ ತೀವ್ರಗೊಂಡು, ತರಗತಿ ಕೊಠಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

ಘಟನೆ ವೇಳೆ ಇಬ್ಬರ ಪರವಾಗಿಯೂ ಕೆಲವರು ಸೇರಿಕೊಂಡು ವಾಗ್ವಾದ ನಡೆಸಿದರೆಂದು ಹೇಳಲಾಗುತ್ತಿದೆ. ಶಿಕ್ಷಕಿ ರೇಷ್ಮಾ ಅವರು, ಪ್ರಿನ್ಸಿಪಾಲ್ ಹೊರಗಿನವರನ್ನು ಕರೆಸಿ ತಮ್ಮ ಮೇಲೆ ಹಲ್ಲೆ ನಡೆಸಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ದೃಶ್ಯಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯೂ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲಾ ವಲಯದಲ್ಲಿ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ಮತ್ತು ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories