ಬೆಂಗಳೂರು: ಪರೀಕ್ಷೆ ಭಯದಿಂದ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು, ಪೋಷಕರು ಕಂಗಾಲು

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರು ಪರೀಕ್ಷೆ ಭಯದಿಂದ ಮನೆ ಬಿಟ್ಟು ನಾಪತ್ತೆಯಾಗಿರುವ ಪ್ರಕರಣ ಆತಂಕ ಮೂಡಿಸಿದೆ. ಕುಟುಂಬಸ್ಥರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೆಂಗಳೂರು (Bengaluru): ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರು ಕಾಣೆಯಾಗಿರುವ ಘಟನೆ ಕುಟುಂಬಸ್ಥರು ಮತ್ತು ಪೊಲೀಸರನ್ನು ಆತಂಕಕ್ಕೀಡು ಮಾಡಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾಣೆಯಾಗಿರುವವರು 2ನೇ ಪಿಯು ಓದುತ್ತಿದ್ದ ತನಿಷ್ಕಾ ಮತ್ತು 1ನೇ ಪಿಯು ವಿದ್ಯಾರ್ಥಿನಿ ತೇಜಸ್ವಿನಿ ಎಂದು ತಿಳಿದುಬಂದಿದೆ. ಇಬ್ಬರೂ ಮನೆಯವರ ಗಮನಕ್ಕೆ ಬರದೆ ಹೊರಗೆ ತೆರಳಿದ್ದು, ಇದರಿಂದ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಮೊಬೈಲ್, ಹಣ ಯಾವುದೂ ತೆಗೆದುಕೊಂಡಿಲ್ಲ

ಮನೆ ಬಿಟ್ಟು ಹೋಗುವಾಗ ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿರುವುದು ಗಮನಾರ್ಹವಾಗಿದೆ. ಜೊತೆಗೆ ಎಟಿಎಂ ಕಾರ್ಡ್ ಅಥವಾ ಹಣವೂ ತೆಗೆದುಕೊಂಡಿಲ್ಲ ಎನ್ನಲಾಗಿದೆ.

ಆಧಾರ್ ಕಾರ್ಡ್ ಮತ್ತು ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ಹೊರಟಿರುವ ಇವರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಉಚಿತ ಬಸ್ ಪ್ರಯಾಣ ಸೌಲಭ್ಯ ಬಳಸಿಕೊಂಡು ಬೇರೆ ಜಿಲ್ಲೆಗೆ ತೆರಳಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪರೀಕ್ಷೆ ಭಯವೇ ಕಾರಣ?

ಪರೀಕ್ಷೆಗಳು ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಭಯದಿಂದ ಹಿರಿಯ ವಿದ್ಯಾರ್ಥಿನಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ವರ್ಷ ಪರೀಕ್ಷೆ ತಪ್ಪಿಸಲು ತನಿಷ್ಕಾ ತನ್ನ ಕೈಗೆ ಗಾಯ ಮಾಡಿಕೊಂಡಿದ್ದ ಘಟನೆ ಕೂಡ ಕುಟುಂಬಸ್ಥರು ತಿಳಿಸಿದ್ದಾರೆ.

ಹೀಗಾಗಿ ಈ ಬಾರಿ ಪರೀಕ್ಷೆ ಬರೆಯಲು ಇಚ್ಛಿಸದೆ ಮನೆ ಬಿಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಮಾಹಿತಿ ತನಿಖೆಯಲ್ಲಿ ಪ್ರಮುಖ ಸುಳಿವಾಗಿ ಪರಿಗಣಿಸಲಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬ

ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿದ ವಿದ್ಯಾರ್ಥಿನಿಯರು “ಮಲೆ ಮಹಾದೇಶ್ವರ ಬೆಟ್ಟದಲ್ಲಿ ಇದ್ದೇವೆ” ಎಂದು ಹೇಳಿದ್ದರೆಂದು ತಿಳಿದುಬಂದಿದೆ. ಒಂದು ವಾರದಲ್ಲಿ ಮತ್ತೆ ಸಂಪರ್ಕಿಸುವುದಾಗಿ ತಿಳಿಸಿದ್ದರು ಎಂಬ ಮಾಹಿತಿ ಕುಟುಂಬಸ್ಥರು ನೀಡಿದ್ದಾರೆ.

ಆದರೆ ನಂತರ ಯಾವುದೇ ಸಂಪರ್ಕವಾಗದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಇದರಿಂದ ಕುಟುಂಬಸ್ಥರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಪೊಲೀಸರಿಗೆ ಒಂದು ವಾರದ ಗಡುವು ನೀಡಿದೆ.

ಸುಮಾರು ಒಂದು ತಿಂಗಳಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಕರೆತರಲು ಅಧಿಕಾರಿಗಳು ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸರು ಹಲವು ಕಡೆಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories