ಚಾಕು ಹಿಡಿದು ಪತ್ನಿ ಮೇಲೆ ಹಲ್ಲೆಗೆ ಬಂದ ಪತಿ! ಸಾರ್ವಜನಿಕರಿಂದ ಬಿತ್ತು ಧರ್ಮದೇಟು
ಬೆಂಗಳೂರಿನ ದಾಸನಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿಗೆ ಚಾಕುವಿನಿಂದ ದಾಳಿ ಮಾಡಲು ಮುಂದಾದ ಪತಿಯನ್ನು ಸಾರ್ವಜನಿಕರು ತಡೆದು ಹಿಡಿದು ಧರ್ಮದೇಟು ನೀಡಿದ ಘಟನೆ ಆತಂಕ ಮೂಡಿಸಿದೆ.

ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ವ್ಯಾಪ್ತಿಯ ದಾಸನಪುರದಲ್ಲಿ ನಡೆದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ರಸ್ತೆಯಲ್ಲಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಆಕೆಯ ಪತಿ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದು, ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಆರೋಪಿ ಸಂಜಯ್ ಎಂಬಾತ ಬೈಕ್‌ನಲ್ಲಿ ಬಂದು ತನ್ನ ಪತ್ನಿಯನ್ನು ಅಡ್ಡಗಟ್ಟಿದ್ದಾನೆ. ಬಳಿಕ ಏಕಾಏಕಿ ಚಾಕು ತೆಗೆದು ದಾಳಿ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ.
ಘಟನೆಯ ವೇಳೆ ಉದ್ರಿಕ್ತಗೊಂಡ ಸಾರ್ವಜನಿಕರು ಆರೋಪಿ ಸಂಜಯ್‌ಗೆ ಧರ್ಮದೇಟು ನೀಡಿದ್ದು, ಅದರ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೊ ಈಗ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಂಜಯ್ ಎರಡನೇ ಮದುವೆಯಾಗಿದ್ದ. ಆದರೆ ಮದ್ಯಪಾನದ ಚಟ ಹಾಗೂ ಕುಟುಂಬ ಕಲಹಗಳಿಂದಾಗಿ ಪತ್ನಿ ಆತನನ್ನು ಬಿಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಹಿನ್ನೆಲೆಯಲ್ಲೇ ಇಬ್ಬರ ನಡುವೆ ವೈಮನಸ್ಸು ಮುಂದುವರಿದಿತ್ತು ಎಂದು ಹೇಳಲಾಗಿದೆ.
ಘಟನೆಯ ನಂತರ ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಮೇಲಿನ ದೌರ್ಜನ್ಯ ಘಟನೆಗಳು ಹೆಚ್ಚುತ್ತಿರುವ ನಡುವೆಯೇ ಈ ಪ್ರಕರಣವೂ ಆತಂಕ ಮೂಡಿಸಿದೆ.



