ಬೆಂಗಳೂರು ಯಲಹಂಕ ಬಳಿ ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಕೊಲೆ

ಕಚೇರಿಗೆ ಆಗಮಿಸುತ್ತಿದ್ದ ಉದ್ಯಮಿ ಚರಣ್ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಪತ್ನಿಯ ಕಣ್ಣೆದುರೇ ನಡೆದ ಈ ಘಟನೆ ಬೆಂಗಳೂರಿನಲ್ಲಿ ಆತಂಕ ಮೂಡಿಸಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ.

  • 35 ವರ್ಷದ ಧನಿ ಪ್ರಾಪರ್ಟೀಸ್ ಮಾಲೀಕ ಚರಣ್ ಕೊಲೆ
  • ಬೈಕ್‌ನಲ್ಲಿ ಬಂದ ಇಬ್ಬರಿಂದ ಮಾರಕಾಸ್ತ್ರಗಳಿಂದ ದಾಳಿ
  • ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಆರಂಭ

ಬೆಂಗಳೂರು (Bengaluru) ಯಲಹಂಕ ನ್ಯೂ ಟೌನ್‌ನಲ್ಲಿ (Yelahanka New Town) ಶುಕ್ರವಾರ ಬೆಳಗ್ಗೆ ನಡೆದ ಭೀಕರ ಹತ್ಯೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ರಿಯಲ್ ಎಸ್ಟೇಟ್ ಉದ್ಯಮಿ (Real Estate) ಚರಣ್ (35) ಅವರನ್ನು ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಚೇರಿಗೆ ಬರುತ್ತಿದ್ದ ವೇಳೆ ನಡೆದ ಈ ದಾಳಿಯಲ್ಲಿ ಚರಣ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಧನಿ ಪ್ರಾಪರ್ಟೀಸ್ ಮಾಲೀಕರಾಗಿದ್ದ ಚರಣ್ ಮೇಲೆ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಹಲ್ಲೆ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಚರಣ್ ಅವರ ಪತ್ನಿಯೂ ಸ್ಥಳದಲ್ಲಿದ್ದರು. ಪತ್ನಿ ಕಿರುಚಿ ಸಹಾಯಕ್ಕಾಗಿ ಕೂಗಿಕೊಂಡರೂ ದಾಳಿಕೋರರು ಹಲ್ಲೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಕುತ್ತಿಗೆ ಭಾಗಕ್ಕೆ ಲಾಂಗ್‌ನಿಂದ ಹೊಡೆದ ಪರಿಣಾಮ ಚರಣ್ ಪ್ರಾಣ ಕಳೆದುಕೊಂಡಿದ್ದಾರೆ.

ಚರಣ್ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹರಿಸಂದ್ರ ಗ್ರಾಮದವರು. ಯಲಹಂಕದ ಕೋಗಿಲು ಸಮೀಪ ವಾಸವಿದ್ದ ಅವರು ಬೆಂಗಳೂರು, ರಾಮನಗರ ಹಾಗೂ ಚನ್ನಪಟ್ಟಣ ಭಾಗಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಮೂರು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಅವರ ಹತ್ಯೆ ಕುಟುಂಬದವರನ್ನು ಆಘಾತಕ್ಕೆ ದೂಡಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಹಂತಕರು ಯಾರು, ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories