ಗ್ರೇಟರ್ ಬೆಂಗಳೂರು ಮತದಾರರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು-ವಾರ್ಡ್ ಚೆಕ್ ಮಾಡಿಕೊಳ್ಳಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ನಾಗರಿಕರು ಆನ್‌ಲೈನ್‌ನಲ್ಲಿ ಹೆಸರು, ವಾರ್ಡ್ ಮತ್ತು ಮತಗಟ್ಟೆ ಪರಿಶೀಲಿಸಬಹುದು. ತಪ್ಪಿದ್ದರೆ ಮಾರ್ಚ್ 16ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಬೆಂಗಳೂರು (Bengaluru): ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಚುನಾವಣಾ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ನಾಗರಿಕರು ಮನೆಯಲ್ಲೇ ಕುಳಿತು ತಮ್ಮ ಹೆಸರು, ವಾರ್ಡ್ ಹಾಗೂ ಮತಗಟ್ಟೆ ವಿವರಗಳನ್ನು ಆನ್‌ಲೈನ್ ಮೂಲಕ ಪರಿಶೀಲಿಸಬಹುದಾಗಿದೆ.

ಈ ಹಿಂದೆ ಜನವರಿ 19ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನಂತರ ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳು ಮತ್ತು ಲೋಪದೋಷಗಳನ್ನು ಪರಿಶೀಲಿಸಿ ಇದೀಗ ತಿದ್ದುಪಡಿ ಮಾಡಿದ ಹೊಸ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಮತದಾರರ ಸಂಖ್ಯೆ ಏರಿಕೆ

ಹೊಸ ಪರಿಷ್ಕೃತ ಪಟ್ಟಿಯ ಪ್ರಕಾರ ಒಟ್ಟು ಮತದಾರರ ಸಂಖ್ಯೆ 88,92,528ಕ್ಕೆ ಏರಿಕೆಯಾಗಿದೆ. ಇದರಲ್ಲಿ 45,69,752 ಪುರುಷರು, 43,21,143 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದ್ದಾರೆ.

ಮತಗಟ್ಟೆಗಳ ಸಂಖ್ಯೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದ್ದು, ಹಿಂದಿನ 8044 ಬದಲು ಈಗ 8024 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಅಂತಿಮ ಮತದಾರರ ಪಟ್ಟಿಯನ್ನು ಏಪ್ರಿಲ್ 6ರಂದು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ನಿಮ್ಮ ಹೆಸರು, ವಾರ್ಡ್ ಮತ್ತು ಮತಗಟ್ಟೆ ಹುಡುಕುವುದು ಹೇಗೆ?

ಪರಿಷ್ಕೃತ ಮತದಾರರ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ (https://gba.karnataka.gov.in/electoral2026/) ಅಪ್‌ಲೋಡ್ ಮಾಡಲಾಗಿದೆ. ನಾಗರಿಕರು ಮೂರು ವಿಧಾನಗಳ ಮೂಲಕ ತಮ್ಮ ಮಾಹಿತಿಯನ್ನು ಹುಡುಕಬಹುದು.

ಮೊದಲ ವಿಧಾನದಲ್ಲಿ ಮತದಾರರ ಗುರುತಿನ ಚೀಟಿಯ EPIC ಸಂಖ್ಯೆ ನಮೂದಿಸಿದರೆ ಹೆಸರು, ವಾರ್ಡ್ ಮತ್ತು ಮತಗಟ್ಟೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಇನ್ನೊಂದು ವಿಧಾನದಲ್ಲಿ ಹೆಸರು, ನಗರ ಪಾಲಿಕೆ, ಹೊಸ ವಾರ್ಡ್, ಸಂಬಂಧಿಕರ ಹೆಸರು, ವಯಸ್ಸು ಅಥವಾ ಜನ್ಮ ದಿನಾಂಕ ನೀಡುವ ಮೂಲಕ ಹುಡುಕಬಹುದು. ಮೂರನೇ ವಿಧಾನದಲ್ಲಿ ಮತಗಟ್ಟೆ ಆಧಾರವಾಗಿ ನಗರ ಪಾಲಿಕೆ, ವಾರ್ಡ್ ಮತ್ತು ಮತದಾನ ಕೇಂದ್ರ ಆಯ್ಕೆ ಮಾಡಿದರೆ ಆ ಪ್ರದೇಶದ ಮತದಾರರ ವಿವರಗಳನ್ನು ಕಾಣಬಹುದು.

ತಪ್ಪಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಿದ್ದರೆ ಅಥವಾ ಬೇರೆ ವಾರ್ಡ್‌ನಲ್ಲಿ ಪ್ರಕಟವಾಗಿದ್ದರೆ ನಾಗರಿಕರು ಆಕ್ಷೇಪಣೆ ಸಲ್ಲಿಸಬಹುದು. ಇದಕ್ಕಾಗಿ ಮಾರ್ಚ್ 16ರವರೆಗೆ ಅವಕಾಶ ನೀಡಲಾಗಿದೆ.

ಮಾರ್ಚ್ 17 ಮತ್ತು 18ರಂದು ತಿದ್ದುಪಡಿ ಪ್ರಕ್ರಿಯೆ ನಡೆಯಲಿದ್ದು, ಮಾರ್ಚ್ 20ರಿಂದ 22ರವರೆಗೆ ಪರಿಶೀಲನೆಯ ನಂತರ ಬದಲಾವಣೆಗಳನ್ನು ಅಂತಿಮಗೊಳಿಸಲಾಗುತ್ತದೆ. ನಂತರ ಏಪ್ರಿಲ್ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಕೆಲವು ಪ್ರಮುಖ ಅಂಕಿ ಅಂಶಗಳು

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 88 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ. ಸುಬ್ರಮಣ್ಯಪುರ ವಾರ್ಡ್‌ನಲ್ಲಿ ಅತಿ ಹೆಚ್ಚು 54,026 ಮತದಾರರು ಇದ್ದರೆ, ಕೊತ್ತೂರು ವಾರ್ಡ್‌ನಲ್ಲಿ ಕೇವಲ 10,940 ಮತದಾರರು ಮಾತ್ರ ಇದ್ದಾರೆ.

ಪಾಲಿಕೆಗಳ ಮಟ್ಟದಲ್ಲಿ ನೋಡಿದರೆ ಪಶ್ಚಿಮ ನಗರ ಪಾಲಿಕೆಯಲ್ಲಿ ಅತಿ ಹೆಚ್ಚು 27,26,573 ಮತದಾರರು ಇದ್ದಾರೆ. ಪೂರ್ವ ನಗರ ಪಾಲಿಕೆಯಲ್ಲಿ ಅತಿ ಕಡಿಮೆ 10,41,396 ಮತದಾರರು ದಾಖಲಾಗಿದ್ದಾರೆ.

ಸಹಾಯವಾಣಿ ಸಂಖ್ಯೆ

ಮತದಾರರಿಗೆ ಅನುಕೂಲವಾಗುವಂತೆ ಪ್ರತಿ ನಗರ ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಸಮಸ್ಯೆ ಇದ್ದರೆ ನಾಗರಿಕರು ಸಂಬಂಧಿತ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಕೇಂದ್ರ – 080-22975803
ಬೆಂಗಳೂರು ಉತ್ತರ – 080-22975936
ಬೆಂಗಳೂರು ದಕ್ಷಿಣ – 9480685704
ಬೆಂಗಳೂರು ಪೂರ್ವ – 9480685706
ಬೆಂಗಳೂರು ಪಶ್ಚಿಮ – 9480685703

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories