Bengaluru: ಬೆಂಗಳೂರು ರೋಡ್ ರೇಜ್; ಸಿಗ್ನಲ್ ಜಂಪ್ ಮಾಡಿ ಕಾರು ಚಾಲಕನಿಗೆ ಅವಾಚ್ಯ ನಿಂದನೆ
ಬೆಂಗಳೂರಿನ ಡಿಕೆನ್ಸನ್ ರಸ್ತೆಯಲ್ಲಿ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಯುವಕ ಸಿಗ್ನಲ್ ಜಂಪ್ ಮಾಡಿದ್ದೂ ಅಲ್ಲದೆ ಪ್ರಶ್ನಿಸಿದ ಕಾರು ಚಾಲಕನನ್ನು ಹಿಂಬಾಲಿಸಿ ನಿಂದನೆ ನಡೆಸಿದ ವಿಡಿಯೋ ವೈರಲ್ ಆಗಿದೆ

ಬೆಂಗಳೂರು (Bengaluru): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಘಟನೆ (Road Rage Incident) ನಾಗರಿಕರಲ್ಲಿ ಆತಂಕ ಮೂಡಿಸಿದೆ. ಗಣರಾಜ್ಯೋತ್ಸವದ ದಿನವೇ ನಡೆದ ಈ ಘಟನೆ ಡಿಕೆನ್ಸನ್ ರಸ್ತೆಯಲ್ಲಿ ಸಂಭವಿಸಿದ್ದು, ಯುವಕನ ಅಜಾಗರೂಕ ಚಾಲನೆ ಹಾಗೂ ಆಕ್ರಮಣಕಾರಿ ವರ್ತನೆಯ ವಿಡಿಯೋ ಇದೀಗ ವ್ಯಾಪಕವಾಗಿ ಹರಡುತ್ತಿದೆ.
KA05 ON 1454 ನೋಂದಣಿ ಸಂಖ್ಯೆಯ TVS NTORQ ದ್ವಿಚಕ್ರ ವಾಹನ ಸವಾರನು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಾನೆ. ಈ ವೇಳೆ ಕಾರಿಗೆ ಢಿಕ್ಕಿಯಾಗುವ ಸಂಭವ ಉಂಟಾಗಿದ್ದು, ಗಾಬರಿಗೊಂಡ ಕಾರು ಮಾಲೀಕ ಸವಾರನಿಗೆ ಎಚ್ಚರಿಕೆ ನೀಡಲು ಕೂಗಿದ್ದಾರೆ.
ಆದರೆ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ಬೈಕ್ ಸವಾರನು ವಾಹನ ನಿಲ್ಲಿಸಿ, ಅಹಂಕಾರದ ಧೋರಣೆಯಲ್ಲಿ ಅವಾಚ್ಯ ಶಬ್ದಗಳಿಂದ ಕಾರು ಚಾಲಕನನ್ನು ನಿಂದಿಸಿದ್ದಾನೆ. “ನನ್ನ ಬೈಕು, ನನ್ನ ಇಷ್ಟ” ಎಂಬ ಧೋರಣೆಯಲ್ಲಿ ಮಾತನಾಡಿದ ಯುವಕ, ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದ್ದಾನೆ.
ಕಾರು ಮಾಲೀಕ ‘ಪೊಲೀಸರ ಮುಂದೆ ಅದೇ ಮಾತು ಹೇಳಿ’ ಎಂದು ಪ್ರಶ್ನಿಸಿದಾಗ, ಯುವಕ ಮತ್ತಷ್ಟು ಕೋಪಗೊಂಡು ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ದ್ವಿಚಕ್ರ ವಾಹನವನ್ನು ಅತಿವೇಗವಾಗಿ, ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಸ್ಥಳದಿಂದ ತೆರಳಿದ್ದಾನೆ. ಈ ಸಂಪೂರ್ಣ ದೃಶ್ಯ ಕಾರು ಮಾಲೀಕನ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ವೈರಲ್ ಆಗಿದೆ.
ಪೊಲೀಸ್ ಕ್ರಮಕ್ಕೆ ಆಗ್ರಹ
ಈ ಘಟನೆ ಕುರಿತು ಕಾರು ಮಾಲೀಕ ಎಂ ಎನ್ ಪ್ರವೀಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರ ಹಂಚಿಕೊಂಡಿದ್ದಾರೆ. ಸಿಗ್ನಲ್ ಜಂಪ್, ಬೆದರಿಕೆ ಮತ್ತು ದೈಹಿಕ ಹಲ್ಲೆ ಯತ್ನಗಳನ್ನು ಸಣ್ಣ ಸಂಚಾರ ಉಲ್ಲಂಘನೆಗಳೆಂದು ನಿರ್ಲಕ್ಷ್ಯಿಸಬಾರದು ಎಂದು ಅವರು ಹೇಳಿದ್ದಾರೆ. ಇವು ಜೀವಕ್ಕೆ ಅಪಾಯ ಉಂಟುಮಾಡುವ ಕ್ರಿಮಿನಲ್ ಕೃತ್ಯಗಳಾಗಿವೆ ಎಂಬುದು ಅವರ ಅಭಿಪ್ರಾಯ.
ಬೆಂಗಳೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಪೂರ್ಣ ತನಿಖೆ ನಡೆಸಿ, ಸಂಬಂಧಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಹೆಚ್ಚಾಗಿದೆ.



