ಬೆಂಗಳೂರು ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್ ವಂಚನೆ ಯತ್ನ

ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಕಲಿ ಸೀಲ್ ಹಾಗೂ ಸಹಿ ಬಳಸಿ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಲು ಸೈಬರ್ ಖದೀಮರು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಎಚ್ಚೆತ್ತ ಮಹಿಳೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಸೈಬರ್ ವಂಚಕರು ಈಗ ಹೊಸ ರೀತಿಯ ತಂತ್ರಕ್ಕೆ ಕೈ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಾರಿ ಅವರು ನೇರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರನ್ನೇ ಬಳಸಿಕೊಂಡು ‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ಮಹಿಳೆಯನ್ನು ಬೆದರಿಸಲು ಯತ್ನಿಸಿದ್ದಾರೆ.

ಮಹಿಳೆಯೊಬ್ಬರಿಗೆ ಬಂದ ಕರೆ ಮೂಲಕ ಈ ಮೋಸದ ಪ್ರಯತ್ನ ಬಯಲಾಗಿದ್ದು, ಸಮಯೋಚಿತವಾಗಿ ಎಚ್ಚೆತ್ತುಕೊಂಡ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಆಡಿಯೋ ಕಾಲ್ ನಂತರ ವಿಡಿಯೋ ಕಾಲ್ ಮೂಲಕ ಬೆದರಿಕೆ

ಮಾಹಿತಿ ಪ್ರಕಾರ, ಆರೋಪಿಗಳು ಮೊದಲು ಮಹಿಳೆಗೆ ಆಡಿಯೋ ಕಾಲ್ ಮಾಡಿ ಅವರ ಕುಟುಂಬದವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ಆರೋಪ ಮಾಡಿ ಹೆದರಿಸಲು ಆರಂಭಿಸಿದರು. ಬಳಿಕ ಆ ಕರೆಯನ್ನು ವಿಡಿಯೋ ಕಾಲ್‌ಗೆ ಪರಿವರ್ತಿಸಿ, ತನಿಖೆ ನಡೆಸಬೇಕೆಂದು ಒತ್ತಡ ಹಾಕಿದ್ದಾರೆ.

ಇದಲ್ಲದೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಕಲಿ ಸೀಲ್ ಮತ್ತು ಸಹಿಯನ್ನು ಬಳಸಿದ ದಾಖಲೆಗಳನ್ನು ಕೂಡ ಕಳುಹಿಸಿ ನಂಬಿಸಲು ಯತ್ನಿಸಿದ್ದಾರೆ. ಕರ್ನಾಟಕ ಸಿಐಡಿ ಹೆಸರಿನಲ್ಲಿ ನಕಲಿ ಅರೆಸ್ಟ್ ವಾರಂಟ್ ಸೃಷ್ಟಿಸಿ, ಸುಪ್ರೀಂ ಕೋರ್ಟ್ ಆದೇಶವೆಂದು ಹೇಳಿ ಮಹಿಳೆಗೆ ಇನ್ನಷ್ಟು ಒತ್ತಡ ತಂದಿದ್ದಾರೆ.

ಅನುಮಾನಗೊಂಡ ಮಹಿಳೆಯಿಂದ ದೂರು

ಆದರೆ ಕಳುಹಿಸಿದ ದಾಖಲೆಗಳಲ್ಲಿ ಅನೇಕ ಅನುಮಾನಾಸ್ಪದ ಅಂಶಗಳು ಕಂಡುಬಂದ ಕಾರಣ ಮಹಿಳೆ ಅಂಜದೆ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಇಮೇಲ್‌ಗೆ ದೂರು ಸಲ್ಲಿಸಿದ್ದು, ಸೈಬರ್ ಕ್ರೈಂ ಪೋರ್ಟಲ್ ಮೂಲಕವೂ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ಪೊಲೀಸರು ಯಾವುದೇ ಸಂದರ್ಭದಲ್ಲೂ ಡಿಜಿಟಲ್ ಅರೆಸ್ಟ್ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ

ಸೈಬರ್ ಕ್ರೈಂ ವಿಭಾಗದ ಡಿಸಿಪಿ ರಾಜಾ ಇಮಾಮ್ ಖಾಸಿಂ ಮಾತನಾಡಿ, ವಿಡಿಯೋ ಕಾಲ್ ಮೂಲಕ ತನಿಖೆ ನಡೆಸುವುದು ಅಥವಾ ಹಣ ಕೇಳುವುದು ಪೊಲೀಸ್ ಇಲಾಖೆಯ ಕ್ರಮವಲ್ಲ ಎಂದು ತಿಳಿಸಿದ್ದಾರೆ.

ಅಂತಹ ಕರೆಗಳು ಬಂದರೆ ಸಾರ್ವಜನಿಕರು ಗಾಬರಿಯಾಗದೆ ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು ಎಂದು ಸೂಚಿಸಿದ್ದಾರೆ. ಇತ್ತೀಚೆಗೆ ಇದೇ ರೀತಿಯ ವಂಚನೆಗೆ ಹಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವುದರಿಂದ, ಜನರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Related Stories