ಬೆಂಗಳೂರು: ಇಂದು ಶಿವಾಜಿನಗರ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಬಳಸಿ
ಸಂತ ಮೇರಿ ಜಯಂತಿ ಕಾರ್ಯಕ್ರಮದ ಹಿನ್ನೆಲೆ ಶಿವಾಜಿನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

- ಶಿವಾಜಿನಗರ ರಸ್ತೆ ಬಂದ್: ವಾಹನ ಸಂಚಾರಕ್ಕೆ ನಿರ್ಬಂಧ
- ಪರ್ಯಾಯ ಮಾರ್ಗ: ಬಿಎಂಟಿಸಿ ಬಸ್‌ಗಳಿಗೆ ಬದಲಿ ಸಂಚಾರ ವ್ಯವಸ್ಥೆ
- ಪಾರ್ಕಿಂಗ್ ನಿಷೇಧ: ಹಲವು ರಸ್ತೆಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ
ಬೆಂಗಳೂರು (Bengaluru), ಆಗಸ್ಟ್ 29; ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆಯಲಿರುವ ಸಂತ ಮೇರಿ ಜಯಂತಿ ಹಾಗೂ ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಸಂಚಾರ ಬದಲಾವಣೆ ಜಾರಿಯಲ್ಲಿರಲಿದೆ. ಹೀಗಾಗಿ ಶಿವಾಜಿನಗರ, ಬಾಳೆಕುಂದ್ರಿ ವೃತ್ತ, ಜ್ಯೋತಿ ಕೆಫೆ ಜಂಕ್ಷನ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ತಮ್ಮ ಮಾರ್ಗವನ್ನು ಯೋಜಿಸಿಕೊಳ್ಳುವುದು ಉತ್ತಮ.
ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?
ಬಾಳೆಕುಂದ್ರಿ ವೃತ್ತದಿಂದ ಜ್ಯೋತಿ ಕೆಫೆ ಜಂಕ್ಷನ್‌ವರೆಗೆ ಹಾಗೂ ಶಿವಾಜಿ ಸರ್ಕಲ್‌ನಿಂದ ಜ್ಯೋತಿ ಕೆಫೆ ಜಂಕ್ಷನ್ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಬಿ.ಆರ್.ವಿ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್ ಹಾಗೂ ಬೋರಿಂಗ್ ಆಸ್ಪತ್ರೆ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್‌ವರೆಗೂ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಕ್ವಾಡ್ರಂಟ್ ವೃತ್ತದಿಂದ ಆರ್.ಎಂ.ಎಸ್ ಜಂಕ್ಷನ್ ಕಡೆಗೆ ಹಾಗೂ ಬಂಬೂ ಬಜಾರ್ ಕಡೆಯಿಂದ ಸುನ್ನಿ ವೃತ್ತದತ್ತ ಸಾಗುವ ಮಾರ್ಗಗಳಲ್ಲಿಯೂ ಸಂಚಾರ ಬಂದ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಅನಗತ್ಯವಾಗಿ ವಾಹನ ತೆಗೆದುಕೊಂಡು ಹೋಗದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಬಿಎಂಟಿಸಿ ಬಸ್‌ಗಳಿಗೆ ಪರ್ಯಾಯ ವ್ಯವಸ್ಥೆ
ಸಂಚಾರ ನಿರ್ಬಂಧದಿಂದ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ತೊಂದರೆಯಾಗದಂತೆ ಬಿಎಂಟಿಸಿ ಬಸ್‌ಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಕ್ವೀನ್ಸ್ ರಸ್ತೆಯಿಂದ ಬರುವ ಬಸ್‌ಗಳು ಟ್ರಾಫಿಕ್ ಹೆಡ್ ಕ್ವಾರ್ಟರ್ಸ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಇನ್‌ಫ್ಯಾಂಟ್ರಿ ರಸ್ತೆಯ ಮೂಲಕ ಶಿವಾಜಿನಗರ ಬಸ್ ನಿಲ್ದಾಣ ತಲುಪಬಹುದಾಗಿದೆ.
ಅನಿಲ್ ಕುಂಭ್ಳೆ ಜಂಕ್ಷನ್ ಮತ್ತು ಮಣಿಪಾಲ್ ಜಂಕ್ಷನ್ ಕಡೆಯಿಂದ ಬರುವ ಬಸ್‌ಗಳ ಪ್ರಯಾಣಿಕರನ್ನು ಬಿಆರ್‌ವಿ ಜಂಕ್ಷನ್ ಬಳಿ ಇಳಿಸಲು ವ್ಯವಸ್ಥೆ ಮಾಡಲಾಗಿದೆ.
ಈ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬೇಡಿ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸಲ್ ಮಾರ್ಕೆಟ್, ಬ್ರಾಡ್‌ವೇ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ ಹಾಗೂ ಕಬ್ಬನ್ ರಸ್ತೆ ಸುತ್ತಮುತ್ತ ವಾಹನ ನಿಲುಗಡೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಈ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೆ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ಸವಾರರು ಎಚ್ಚರಿಕೆ ವಹಿಸಬೇಕು.
ವಾಹನ ನಿಲುಗಡೆ ಅಗತ್ಯವಿರುವವರು ಚೋಟಾ ಮೈದಾನ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಸಫೀನಾ ಪ್ಲಾಜಾ ಮುಂಭಾಗ ಹಾಗೂ ರಮಡಾ ಹೋಟೆಲ್ ಆವರಣವನ್ನು ಬಳಸುವಂತೆ ಸೂಚಿಸಲಾಗಿದೆ.
ಸಂಚಾರ ದಟ್ಟಣೆ ಹಾಗೂ ಅನಗತ್ಯ ವಿಳಂಬ ತಪ್ಪಿಸಲು ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವುದು ಮತ್ತು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವುದು ಸೂಕ್ತ.



