ಯುಗಾದಿ ಹಬ್ಬಕ್ಕೆ ಊರಿಗೆ ಹೋದವರಿಗೆ ಗುಡ್ ನ್ಯೂಸ್! ಬೆಂಗಳೂರು ಬರಲು ಸ್ಪೆಷಲ್ ರೈಲುಗಳು
ಯುಗಾದಿ ಮತ್ತು ರಂಜಾನ್ ರಜೆಗಾಗಿ ಊರಿಗೆ ತೆರಳಿದ್ದ ಪ್ರಯಾಣಿಕರು ಬೆಂಗಳೂರಿಗೆ ವಾಪಸ್ ಬರಲು ನೈಋತ್ಯ ರೈಲ್ವೆ ಹಲವು ವಿಶೇಷ ರೈಲುಗಳನ್ನು ಆರಂಭಿಸಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಗೋವಾ ಮತ್ತು ಹೊಸಪೇಟೆ ಮಾರ್ಗಗಳಲ್ಲಿ ಸಂಚಾರ.

ಯುಗಾದಿ ಹಾಗೂ ರಂಜಾನ್ ಹಬ್ಬದ (Ugadi and Ramadan Festival) ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬಂದಿದ್ದರಿಂದ ಬೆಂಗಳೂರಿನಿಂದ ಸಾವಿರಾರು ಜನರು ತಮ್ಮ ಊರುಗಳಿಗೆ ಪ್ರಯಾಣಿಸಿದ್ದರು. ಇದೀಗ ರಜೆ ಮುಗಿದು ಮತ್ತೆ ನಗರಕ್ಕೆ ವಾಪಸ್ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿರುವುದರಿಂದ ನೈಋತ್ಯ ರೈಲ್ವೆ (South Western Railway – SWR) ಹಲವು ವಿಶೇಷ ರೈಲುಗಳ ಸೇವೆ ಆರಂಭಿಸಿದೆ.
ಪ್ರಯಾಣಿಕರ ಹೆಚ್ಚುತ್ತಿರುವ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಿಗೆ ಈ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೊಸಪೇಟೆ ಹಾಗೂ ಗೋವಾ ಮಾರ್ಗಗಳಲ್ಲಿ ಈ ರೈಲುಗಳು ಸಂಚರಿಸಲಿವೆ.
ಬೆಂಗಳೂರು – ಬೆಳಗಾವಿ ವಿಶೇಷ ರೈಲು
ರೈಲು ಸಂಖ್ಯೆ 06503 ಮಾರ್ಚ್ 18ರಂದು ಸಂಜೆ 7 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 7.35ಕ್ಕೆ ಬೆಳಗಾವಿ ತಲುಪಿದೆ.
ಮರು ಪ್ರಯಾಣದ ರೈಲು ಸಂಖ್ಯೆ 06504 ಮಾರ್ಚ್ 22ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮಾರ್ಚ್ 23ರಂದು ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಬೆಂಗಳೂರು – ವಿಜಯಪುರ ವಿಶೇಷ ರೈಲು
ರೈಲು ಸಂಖ್ಯೆ 06277 ಮಾರ್ಚ್ 18ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 9.45ಕ್ಕೆ ವಿಜಯಪುರ ತಲುಪಿದೆ.
ಮರು ಪ್ರಯಾಣದ ರೈಲು ಸಂಖ್ಯೆ 06278 ಮಾರ್ಚ್ 22ರಂದು ಮಧ್ಯಾಹ್ನ 1.30ಕ್ಕೆ ವಿಜಯಪುರದಿಂದ ಹೊರಟು, ಮಾರ್ಚ್ 23ರಂದು ರಾತ್ರಿ 12.30ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಹುಬ್ಬಳ್ಳಿ – ಯಶವಂತಪುರ ವಿಶೇಷ ರೈಲು
ರೈಲು ಸಂಖ್ಯೆ 07379 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 8.15ಕ್ಕೆ ಯಶವಂತಪುರ ತಲುಪಿದೆ.
ಮಧ್ಯದಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಹೊಂದಿದೆ.
ಬೆಂಗಳೂರು – ಗೋವಾ ವಿಶೇಷ ರೈಲು
ರೈಲು ಸಂಖ್ಯೆ 06267 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಬೆಳಿಗ್ಗೆ 6.45ಕ್ಕೆ ಗೋವಾದ ಮಡಗಾಂವ್ ತಲುಪಿದೆ.
ಮರು ಪ್ರಯಾಣದ ರೈಲು ಸಂಖ್ಯೆ 06268 ಮಾರ್ಚ್ 19ರಂದು ಬೆಳಿಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು, ಮಾರ್ಚ್ 20ರಂದು ಬೆಳಿಗ್ಗೆ 5.20ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ. ಈ ರೈಲು SMVT ಬೆಂಗಳೂರಲ್ಲಿಯೂ ನಿಲುಗಡೆ ಹೊಂದಿದೆ.
ಬೆಂಗಳೂರು – ಹೊಸಪೇಟೆ ವಿಶೇಷ ರೈಲು
ರೈಲು ಸಂಖ್ಯೆ 06533 ಮಾರ್ಚ್ 18ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಮಧ್ಯಾಹ್ನ 4ಕ್ಕೆ ಹೊಸಪೇಟೆ ತಲುಪಿದೆ.
ಮರು ಪ್ರಯಾಣದ ರೈಲು ಸಂಖ್ಯೆ 06534 ಮಾರ್ಚ್ 19ರಂದು ಬೆಳಿಗ್ಗೆ 9ಕ್ಕೆ ಹೊಸಪೇಟೆಯಿಂದ ಹೊರಟು, ಸಂಜೆ 7.20ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟೋನ್ಮೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಪ್ರಯಾಣಿಕರಿಗೆ ನೆರವಾಗುವ ಕ್ರಮ
ಹಬ್ಬದ ದಿನಗಳಲ್ಲಿ ಊರಿಗೆ ತೆರಳಿದ್ದ ಸಾವಿರಾರು ಪ್ರಯಾಣಿಕರು ಮರಳಿ ಬೆಂಗಳೂರಿಗೆ ಬರಲಿರುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ಬಹಳ ಸಹಾಯಕವಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮುಂದಿನ ಕೆಲವು ದಿನಗಳವರೆಗೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದರೆ ಇನ್ನಷ್ಟು ವಿಶೇಷ ರೈಲುಗಳನ್ನು ಕೂಡ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.



