ಬೆಂಗಳೂರು: ಬುಲೆಟ್ ಬೈಕ್‌ಗೆ ಕಾರು ಡಿಕ್ಕಿ; 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒನ್‌ವೇ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಾಯಗಳಾಗಿವೆ.

ಬೆಂಗಳೂರು (Bengaluru): ಒನ್‌ವೇ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ಯಲಹಂಕ (Yelahanka) ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್‌ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿಯೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವಿದ್ಯಾರ್ಥಿಯನ್ನು ವಿದ್ಯಾರಣ್ಯಪುರ ನಿವಾಸಿ ಹೇಮಂತ್ (16) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಸುಮಾರು 7.30ರ ವೇಳೆಗೆ ಹೇಮಂತ್ ತನ್ನ ಸ್ನೇಹಿತನನ್ನು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನ ಹಿಂಬದಿ ಕೂರಿಸಿಕೊಂಡು ದೊಡ್ಡಬೆಟ್ಟಹಳ್ಳಿ ಲೇಔಟ್ ಕಡೆಯಿಂದ ಶ್ಯಾಮರಾಜಪುರದ ಜೆ.ಕೆ. ಬಸವಣ್ಣ ಸರ್ಕಲ್ ಬಳಿಯ ನ್ಯೂ ಬಿಡಿಎ ಲೇಔಟ್ ರಸ್ತೆಯಲ್ಲಿ ತೆರಳುತ್ತಿದ್ದ.
ಇದನ್ನೂ ಓದಿ: ಬೆಂಗಳೂರು: ಏರ್ ಇಂಡಿಯಾ ವಿಮಾನಕ್ಕೆ ಆಕಾಶದಲ್ಲೇ ಹಕ್ಕಿ ಡಿಕ್ಕಿ! ತಪ್ಪಿದ ಭಾರೀ ಅನಾಹುತ
ಈ ವೇಳೆ ಬ್ಯಾಲದ ಕೆರೆ ಕಡೆಯಿಂದ ಬಂದ ಕಾರು ಚಾಲಕ, ಒನ್‌ವೇ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.
ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಹೇಮಂತ್‌ನ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆತನ ಸ್ನೇಹಿತನ ಕಾಲು ಮತ್ತು ತೊಡೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



