ಬೆಂಗಳೂರು: ಸ್ನೇಹಿತನ ಮನೆಯಲ್ಲೇ ದರೋಡೆ: ಸ್ಟಾಂಪ್ ವೆಂಡರ್ ಮಾಸ್ಟರ್ ಮೈಂಡ್ ಬಯಲು
ಬೆಂಗಳೂರು ಬಿಇಎಲ್ ಲೇಔಟ್‌ನಲ್ಲಿ ಉದ್ಯಮಿ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಾಣ ಸ್ನೇಹಿತನಾದ ಸ್ಟಾಂಪ್ ವೆಂಡರ್ ಮಾಹಿತಿ ನೀಡಿ ದರೋಡೆ ಮಾಡಿಸಿದ್ದೇ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರು (Bengaluru): ಬೆಂಗಳೂರು ನಗರದ ಬಿಇಎಲ್ ಲೇಔಟ್‌ನಲ್ಲಿ ನಡೆದ ದರೋಡೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಇದು ಹೊರಗಿನ ಗ್ಯಾಂಗ್ ಕೃತ್ಯ ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ, ಪ್ರಕರಣದ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ವಿಕ್ಟಿಮ್‌ನ ಪ್ರಾಣ ಸ್ನೇಹಿತನೇ ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಹೊಂಬೇಗೌಡ ಅವರ ಮನೆಯಲ್ಲಿ ನಡೆದ ಈ ದರೋಡೆ ವೇಳೆ ಆರೋಪಿಗಳು ಪೊಲೀಸರಂತೆ ವೇಷಧರಿಸಿ ಮನೆಗೆ ಪ್ರವೇಶಿಸಿದ್ದರು. ತಮ್ಮನ್ನು ಯಲಹಂಕ ಠಾಣೆಯ ಸಿಬ್ಬಂದಿ ಎಂದು ಹೇಳಿ ಮನೆಯವರನ್ನು ನಂಬಿಸಿದ್ದರು.
ದರೋಡೆ ಹೇಗೆ ನಡೆದಿದೆ?
ಘಟನೆ ನಡೆದ ದಿನ ಹೊಂಬೇಗೌಡ ಅವರು ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಇದ್ದರು. ಈ ವೇಳೆ ಬ್ಯಾಗ್ ಹಾಗೂ ಡೈರಿ ಹಿಡಿದು ಬಂದ ಆರೋಪಿಗಳು ಪೊಲೀಸರು ಎಂದು ಹೇಳಿ ಮನೆಗೆ ಒಳಬಂದಿದ್ದಾರೆ. ಆರಂಭದಲ್ಲಿ ಮನೆಯವರು ಅನುಮಾನಪಡದೇ ಮಾತನಾಡಿದ್ದಾರೆ.
ಆದರೆ ಸ್ವಲ್ಪ ಸಮಯದ ಬಳಿಕ ಆರೋಪಿಗಳು ಬಂದೂಕು ಹಾಗೂ ಚಾಕುವಿನಿಂದ ಬೆದರಿಸಿ ವೃದ್ಧ ದಂಪತಿಯನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯಲ್ಲಿ ಇದ್ದ ಸುಮಾರು 20 ಲಕ್ಷ ರೂಪಾಯಿ ನಗದು ಮತ್ತು ಅರ್ಧ ಕಿಲೋಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸ್ನೇಹಿತನೇ ಕೊಟ್ಟ ಮಾಹಿತಿ
ಈ ಪ್ರಕರಣವನ್ನು ಭೇದಿಸಲು ಮುಂದಾದ ಬ್ಯಾಡರಹಳ್ಳಿ ಪೊಲೀಸರು ಈಗಾಗಲೇ ನಾಗೇಂದ್ರ ಮತ್ತು ಬಚ್ಚನ್ ಎಂಬ ಇಬ್ಬರನ್ನು ಬಂಧಿಸಿದ್ದರು. ಅವರ ವಿಚಾರಣೆಯಲ್ಲಿ ದರೋಡೆ ಹಿಂದೆ ಇನ್ನೊಬ್ಬನ ಕೈವಾಡ ಇರುವುದಾಗಿ ಮಾಹಿತಿ ಸಿಕ್ಕಿತ್ತು.
ತನಿಖೆ ತೀವ್ರಗೊಳಿಸಿದಾಗ ಹೊಂಬೇಗೌಡರ ಪ್ರಾಣ ಸ್ನೇಹಿತನಾದ ಬೆಟ್ಟೇಗೌಡ ಎಂಬ ಸ್ಟಾಂಪ್ ವೆಂಡರ್ ಈ ದರೋಡೆಗೆ ಸುಳಿವು ನೀಡಿದ್ದಾನೆ ಎಂಬುದು ಬಹಿರಂಗವಾಗಿದೆ. ಹೊಂಬೇಗೌಡರು ಸೈಟ್ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬೆಟ್ಟೇಗೌಡನ ಬಳಿ ಮಾಡಿಸಿದ್ದರಿಂದ, ಅವರ ಬಳಿ ದೊಡ್ಡ ಮೊತ್ತದ ಹಣ ಇದೆ ಎಂಬ ಮಾಹಿತಿ ಅವನಿಗೆ ತಿಳಿದಿತ್ತು.
ಜೈಲಿನಿಂದ ಬಂದ ಆರೋಪಿಗೆ ಐಡಿಯಾ
ಈ ಮಾಹಿತಿ ತಿಳಿದ ಬೆಟ್ಟೇಗೌಡ, ಜೈಲಿನಿಂದ ಪೆರೋಲ್ ಮೇಲೆ ಹೊರಬಂದಿದ್ದ ನಾಗೇಂದ್ರನಿಗೆ ದರೋಡೆ ಮಾಡಲು ಸಲಹೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾಜಿನಗರದಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಹೇಳಿ ಸಬ್ ಇನ್ಸ್‌ಪೆಕ್ಟರ್ ಯೂನಿಫಾರ್ಮ್ ಬಾಡಿಗೆಗೆ ಪಡೆದು, ಅದನ್ನೇ ಧರಿಸಿ ಮನೆಗೆ ಹೋಗಿ ದರೋಡೆ ನಡೆಸಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಈಗ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ವಿವರಗಳನ್ನು ಸಂಗ್ರಹಿಸುತ್ತಿದ್ದು, ಇನ್ನೂ ಯಾರಾದರೂ ಆರೋಪಿಗಳು ಇದ್ದಾರೆಯೇ ಎಂಬುದರ ಬಗ್ಗೆ ಪರಿಶೀಲನೆ ಮುಂದುವರಿದಿದೆ.



