Bengaluru: ಬೆಂಗಳೂರು ಭಾಗದಲ್ಲಿ ಆತ್ಮ*ಹತ್ಯೆ ಏರಿಕೆ ಆತಂಕ! 4 ವರ್ಷಕ್ಕೆ 9,450ಕ್ಕೂ ಹೆಚ್ಚು ಕೇಸ್
ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿರುವ ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 9,450ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಮಾನಸಿಕ ಆರೋಗ್ಯ, ಆರ್ಥಿಕ ಸಂಕಷ್ಟ ಮತ್ತು ಕುಟುಂಬ ಕಲಹಗಳು ಪ್ರಮುಖ ಕಾರಣಗಳಾಗಿವೆ.

- ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ
- ನಾಲ್ಕು ವರ್ಷಗಳಲ್ಲಿ 9,450ಕ್ಕೂ ಹೆಚ್ಚು ಆತ್ಮಹತ್ಯೆ ಕೇಸ್
- ಮಾನಸಿಕ ಆರೋಗ್ಯ, ಆರ್ಥಿಕ ಸಂಕಷ್ಟ ಕಾರಣಗಳು
ಬೆಂಗಳೂರು (Bengaluru): ಐಟಿ ನಗರಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲಭ್ಯ ಮಾಹಿತಿಯ ಪ್ರಕಾರ, ನಗರದಲ್ಲಿ ಸರಾಸರಿ ಮೂರುವರೆ ಗಂಟೆಗೆ ಒಂದು ಸಾವು ಸಂಭವಿಸುತ್ತಿದೆ. ಅಂದರೆ ಪ್ರತಿದಿನವೂ ಆರುರಿಂದ ಏಳು ಮಂದಿ ಜೀವ ಕಳೆದುಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 9,450ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ವರ್ಷಕ್ಕೆ ಸರಾಸರಿ ಎರಡು ಸಾವಿರಕ್ಕಿಂತ ಅಧಿಕ ಸಾವುಗಳು ಸಂಭವಿಸಿರುವುದು ಗಮನಾರ್ಹ.
ವರ್ಷವಾರು ದಾಖಲೆ
2022ರಲ್ಲಿ 2,370 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 2,313 ಪ್ರಕರಣಗಳು ವರದಿಯಾಗಿವೆ. 2024ರಲ್ಲಿ ಈ ಸಂಖ್ಯೆ 2,403ಕ್ಕೆ ಏರಿಕೆಯಾಗಿದೆ. 2025ರಲ್ಲೂ 2,300ಕ್ಕೂ ಹೆಚ್ಚು ಪ್ರಕರಣಗಳು ಈಗಾಗಲೇ ದಾಖಲಾಗಿರುವುದು ನಗರಕ್ಕೆ ಎಚ್ಚರಿಕೆಯ ಘಂಟೆಯಂತೆ ಪರಿಣಮಿಸಿದೆ.
ಕಾರಣಗಳ ಬಗ್ಗೆ ತಜ್ಞರ ಎಚ್ಚರಿಕೆ
ತಜ್ಞರ ಅಭಿಪ್ರಾಯದಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಪ್ರಮುಖ ಕಾರಣವಾಗಿವೆ. ಕುಟುಂಬ ಕಲಹ, ಆರ್ಥಿಕ ಒತ್ತಡ, ಸಂಬಂಧಗಳ ಭಂಗ, ಉದ್ಯೋಗದ ಅಸ್ಥಿರತೆ ಇವುಗಳೂ ಯುವಕರು ಮತ್ತು ಮಧ್ಯವಯಸ್ಕರಲ್ಲಿ ಮಾನಸಿಕ ಒತ್ತಡ ಹೆಚ್ಚಿಸುತ್ತಿವೆ. ಸುಮಾರು ಮೂರನೇ ಒಂದು ಭಾಗ ಮಂದಿಗೆ ಮಾನಸಿಕ ಅಸ್ವಸ್ಥತೆ ಹಿನ್ನೆಲೆ ಇರುವುದಾಗಿ ತಿಳಿದುಬಂದಿದೆ. ಉಳಿದವರಲ್ಲಿ ಭಾವನಾತ್ಮಕ ಸಂಕಷ್ಟ ಮತ್ತು ಆರ್ಥಿಕ ಸಮಸ್ಯೆಗಳು ಪ್ರಮುಖ ಕಾರಣಗಳಾಗಿವೆ.
ಯಾವ ವಿಧಾನ ಹೆಚ್ಚು?
ನಗರದಲ್ಲಿ ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ನೇಣು ಬಿಗಿದುಕೊಳ್ಳುವ ವಿಧಾನವೇ ಹೆಚ್ಚಾಗಿದೆ. ಒಟ್ಟು ಪ್ರಕರಣಗಳಲ್ಲಿ ಸುಮಾರು 86 ಶೇಕಡಾ ಮಂದಿ ಈ ವಿಧಾನವನ್ನು ಬಳಸಿರುವುದು ಕಂಡುಬಂದಿದೆ. ವಿಷ ಸೇವನೆ, ಎತ್ತರದ ಕಟ್ಟಡಗಳಿಂದ ಜಿಗಿತ, ರೈಲು ಹಳಿಗಳ ಮೇಲೆ ಜಿಗಿಯುವುದು ಮತ್ತು ಬೆಂಕಿಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಗಮನಾರ್ಹ ಪ್ರಮಾಣದಲ್ಲಿವೆ.
ಸಹಾಯವಾಣಿ ಸಂಪರ್ಕಿಸಿ
ಮಾನಸಿಕ ಸಂಕಷ್ಟ ಎದುರಿಸುತ್ತಿರುವವರಿಗೆ ನೆರವಾಗಲು ಟೆಲಿ-ಮನಸ್ (Tele-MANAS) ಸಹಾಯವಾಣಿ ಆರಂಭಿಸಲಾಗಿದೆ. ಸಂಕಷ್ಟದ ಸಮಯದಲ್ಲಿ 14416 ಅಥವಾ 1800-891-4416 ಸಂಖ್ಯೆಗೆ ಕರೆ ಮಾಡಿ ತಜ್ಞರ ಸಲಹೆ ಪಡೆಯಬಹುದು. ತಜ್ಞರು ಹೇಳುವಂತೆ, ಸಮಸ್ಯೆಗಳನ್ನು ಒಬ್ಬರೇ ಹೊತ್ತುಕೊಳ್ಳುವುದಕ್ಕಿಂತ ಸಮಯಕ್ಕೆ ಸರಿಯಾಗಿ ಸಹಾಯ ಕೇಳುವುದು ಅತ್ಯಂತ ಮುಖ್ಯ.



