ಬೆಂಗಳೂರು: ಜಿಗಣಿ ಬಳಿಯ ಕಲ್ಲು ಕ್ವಾರಿಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಟೆಕ್ಕಿ ನಾಪತ್ತೆ
ಜಿಗಣಿ ಬಳಿಯ ಕಲ್ಲು ಕ್ವಾರಿಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಎಂಟು ಮಂದಿಯ ತಂಡದಲ್ಲಿದ್ದ ಟೆಕ್ಕಿಯೊಬ್ಬರು ನೀರಿನಲ್ಲಿ ಈಜಲು ಇಳಿದ ವೇಳೆ ಮುಳುಗಿ ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ.

ಬೆಂಗಳೂರು (Bengaluru) ಹೊರವಲಯದ ಜಿಗಣಿ (Jigani) ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ಟ್ರೆಕ್ಕಿಂಗ್ (Trekking) ವೇಳೆ ನೀರಿನಲ್ಲಿ ಈಜಲು ತೆರಳಿದ್ದ ಟೆಕ್ಕಿಯೊಬ್ಬರು ಮುಳುಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಆಂಧ್ರ ಪ್ರದೇಶ ಮೂಲದ 30 ವರ್ಷದ ವಿನಯ್ ನಾಪತ್ತೆಯಾಗಿರುವ ಟೆಕ್ಕಿ. ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದ ಅವರು ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.
ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಲು ವಿನಯ್ ಸೇರಿದಂತೆ ಎಂಟು ಮಂದಿ ಬಿಎಲ್‌ಆರ್ ಹೈಕ್ (BLR Hike) ಇನ್‌ಸ್ಟಾಗ್ರಾಂ ಗುಂಪಿನ ಮೂಲಕ ತಂಡ ರಚಿಸಿಕೊಂಡಿದ್ದರು. ಬಳಿಕ ಜಿಗಣಿ ಸಮೀಪದ ಕಲ್ಲು ಕ್ವಾರಿಗೆ ತೆರಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಡಿಸೆಂಬರ್ 4ರಿಂದ ‘ಬೆಂಗಳೂರು ಜಾತ್ರೆ’! 10 ದಿನ ಬೆಂಗಳೂರಲ್ಲಿ ಊರಹಬ್ಬದ ಸಂಭ್ರಮ
ಶುಕ್ರವಾರ ಸಂಜೆ ಸುಮಾರು 5.30ರ ವೇಳೆಗೆ ತಂಡ ಕ್ವಾರಿಯ ನೀರಿನ ಬಳಿ ತೆರಳಿತ್ತು. ಈ ವೇಳೆ ವಿನಯ್ ಈಜಲು ನೀರಿಗೆ ಇಳಿದಿದ್ದು, ಈಜುತ್ತಿದ್ದಾಗ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಉಳಿದ ತಂಡದ ಸದಸ್ಯರು ನೀರಿನಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಜಿಗಣಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನಂತರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿನಯ್‌ಗಾಗಿ ಶೋಧ ಆರಂಭಿಸಿದ್ದಾರೆ. ಶುಕ್ರವಾರ ಸಂಜೆಯಿಂದಲೇ ಶೋಧಕಾರ್ಯ ನಡೆಯುತ್ತಿದ್ದು, ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಘಟನೆ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ವಿನಯ್‌ಗಾಗಿ ಆತಂಕದಿಂದ ಕಾಯುತ್ತಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



