ಪೊಲೀಸ್ ಮನೆಯಲ್ಲೇ ಕಳ್ಳತನ! 35 ಗ್ರಾಂ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿ

ಗಣೇಶೋತ್ಸವ ಮೆರವಣಿಗೆ ಭದ್ರತಾ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಮನೆಗೆ ಕನ್ನ ಹಾಕಿದ ಕಳ್ಳರು, 35 ಗ್ರಾಂ ಚಿನ್ನಾಭರಣ ಮತ್ತು 6 ಸಾವಿರ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ.

  • ಪೊಲೀಸ್ ಮನೆಗೆ ಕನ್ನ ಹಾಕಿದ ಖದೀಮರು
  • 35 ಗ್ರಾಂ ಚಿನ್ನಾಭರಣ, ₹6 ಸಾವಿರ ನಗದು ಕಳವು
  • ಗಣೇಶೋತ್ಸವ ಭದ್ರತಾ ಕರ್ತವ್ಯದಲ್ಲಿದ್ದಾಗ ಕಳ್ಳತನ

ಬೆಂಗಳೂರು (Bengaluru): ಗಣೇಶೋತ್ಸವ ಮೆರವಣಿಗೆಗೆ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯ ಬಾಡಿಗೆ ಮನೆಗೇ ಕಳ್ಳರು ಕನ್ನ ಹಾಕಿರುವ ಘಟನೆ ಈಶಾನ್ಯ ಬೆಂಗಳೂರಿನ ಹುಣಸಮಾರನಹಳ್ಳಿ ಸಮೀಪದ ಸುಗ್ಗಟ್ಟ ಗ್ರಾಮದಲ್ಲಿ ನಡೆದಿದೆ.

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಂಗಪ್ಪ ಬಂಡಿವಡ್ಡರ ಅವರ ಬಾಡಿಗೆ ಮನೆಯನ್ನು ಸೆ.18ರಂದು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು, ಮುಖ್ಯ ಬಾಗಿಲಿನ ಬೀಗ ಒಡೆದು ಒಳನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿದ್ದಾರೆ.

ರಂಗಪ್ಪ ಅವರು ಕಳೆದ ಎರಡು ವರ್ಷಗಳಿಂದ ಸುಗ್ಗಟ್ಟ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೆ.18ರಂದು ಬೆಳಗ್ಗೆ ಸುಮಾರು 10.30ಕ್ಕೆ ಮನೆಗೆ ಬೀಗ ಹಾಕಿಕೊಂಡು ಕರ್ತವ್ಯಕ್ಕೆ (Police Duty) ತೆರಳಿದ್ದರು. ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆರೈಕೆಗಾಗಿ ಸುಮಾರು ಒಂದು ತಿಂಗಳಿನಿಂದ ತವರು ಮನೆಯಲ್ಲಿದ್ದರು ಎನ್ನಲಾಗಿದೆ.

ರಾತ್ರಿ ಸುಮಾರು 10 ಗಂಟೆಗೆ ರಂಗಪ್ಪ ಮನೆಗೆ ವಾಪಸ್ ಬಂದಾಗ ಬಾಗಿಲಿನ ಬೀಗ ಒಡೆದಿರುವುದು ಕಂಡುಬಂದಿದೆ. ಒಳಗೆ ತೆರಳಿ ಪರಿಶೀಲಿಸಿದಾಗ ಕಪಾಟು ತೆರೆದಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದರಿಂದ ಕಳ್ಳರು ಮನೆ ಜಾಲಾಡಿರುವುದು ಅವರಿಗೆ ಗೊತ್ತಾಗಿದೆ.

ಬಳಿಕ ಪರಿಶೀಲನೆ ನಡೆಸಿದಾಗ ಸುಮಾರು 35 ಗ್ರಾಂ ಚಿನ್ನಾಭರಣ (Gold Jewellery) ಹಾಗೂ ₹6,000 ನಗದು ಕಳವಾಗಿರುವುದು ಪತ್ತೆಯಾಗಿದೆ. ಕಳುವಾದ ಆಭರಣಗಳಲ್ಲಿ ರಂಗಪ್ಪ ಅವರ ಪತ್ನಿ ಹಾಗೂ ಮಗನ ಚಿನ್ನದ ಸರಗಳು ಮತ್ತು ಉಂಗುರಗಳು ಸೇರಿವೆ.

ಗಣೇಶೋತ್ಸವ ಮೆರವಣಿಗೆಗಳ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಕಾರಣ ದೂರು ನೀಡಲು ಸ್ವಲ್ಪ ವಿಳಂಬವಾಯಿತು ಎಂದು ರಂಗಪ್ಪ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories