ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಅಪಘಾತ, ಮೂವರು ಮಹಿಳೆಯರು ಸಾವು

ಕಾಶಿ ಪ್ರವಾಸಕ್ಕಾಗಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರು (Bengaluru): ಕಾಶಿಗೆ ಪವಿತ್ರ ಯಾತ್ರೆಗೆ ತೆರಳಿದ್ದ ಮಹಿಳೆಯರ ಪ್ರಯಾಣ ದುರ್ಘಟನೆಯಾಗಿ ಅಂತ್ಯಗೊಂಡ ಘಟನೆ ಬೆಂಗಳೂರಿನ ದೇವನಹಳ್ಳಿ ಹೊರವಲಯದಲ್ಲಿ ನಡೆದಿದೆ. ಮಧ್ಯರಾತ್ರಿ ನಡೆದ ಈ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ.

ತಿಪಟೂರು ಭಾಗದಿಂದ ಸುಮಾರು 15 ದಿನಗಳ ಕಾಶಿ ಪ್ರವಾಸಕ್ಕೆ ಹೊರಟಿದ್ದ 12 ಜನರ ತಂಡ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಟಿ ವಾಹನದಲ್ಲಿ ತೆರಳುತ್ತಿತ್ತು. ಬೆಳಗ್ಗೆ 6 ಗಂಟೆಗೆ ವಿಮಾನ ಪ್ರಯಾಣವಿದ್ದ ಕಾರಣ, ಅವರು ರಾತ್ರಿ ಸುಮಾರು 10 ಗಂಟೆಗೆ ಪ್ರಯಾಣ ಆರಂಭಿಸಿದ್ದರು.

ಹೇಗೆ ಸಂಭವಿಸಿತು ಅಪಘಾತ?

ದೇವನಹಳ್ಳಿ ಸಮೀಪದ ರಾಣಿ ಕ್ರಾಸ್ ಬಳಿ ಹೈವೆಯಿಂದ ಸರ್ವೀಸ್ ರಸ್ತೆಗೆ ತಿರುಗುವಾಗ ಅಪಘಾತ ಸಂಭವಿಸಿದೆ. ಗೂಗಲ್ ಮ್ಯಾಪ್ ಸಹಾಯದಿಂದ ವಾಹನ ಚಾಲನೆ ಮಾಡುತ್ತಿದ್ದ ಚಾಲಕ ಮೊದಲ ಟರ್ನಿಂಗ್ ಮಿಸ್ ಮಾಡಿಕೊಂಡಿದ್ದಾನೆ. ಬಳಿಕ ಮುಂದಿನ ಟರ್ನಿಂಗ್ ಬಳಿ ಯೂ-ಟರ್ನ್ ಪಡೆಯುವ ವೇಳೆ ಪಕ್ಕದಿಂದ ಬಂದ ಲಾರಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಟಿಟಿ ವಾಹನದ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಅಲ್ಲಿ ಕುಳಿತಿದ್ದ ಮೂವರು ಮಹಿಳೆಯರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಜಯಮ್ಮ (60), ಯಶೋದಮ್ಮ (60) ಮತ್ತು ಗಂಗಾ (38) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮೇಡಹಳ್ಳಿ ಸೇತುವೆ ಮೇಲೆ ಭೀಕರ ಅಪಘಾತ! ಮೂವರು ಸ್ಥಳದಲ್ಲೇ ಸಾವು

ಗಾಯಾಳುಗಳಿಗೆ ಚಿಕಿತ್ಸೆ

ಅಪಘಾತದಲ್ಲಿ ಚಾಲಕ ಸೇರಿದಂತೆ ಒಟ್ಟು 8 ಮಂದಿ ಗಾಯಗೊಂಡಿದ್ದು, ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಪಮ್ಮ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಬಳಿಕ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಪೊಲೀಸ್ ಮಾಹಿತಿ

ಸಂಚಾರಿ ವಿಭಾಗದ ಅಧಿಕಾರಿಗಳ ಪ್ರಕಾರ, ಟಿಟಿ ವಾಹನ ಏರ್ಪೋರ್ಟ್‌ಗೆ ಪ್ರಯಾಣಿಕರನ್ನು ಬಿಟ್ಟುಬರುವುದಕ್ಕಾಗಿ ತೆರಳುತ್ತಿತ್ತು. ಗೂಗಲ್ ಮ್ಯಾಪ್ ಬಳಸಿ ಬರುತ್ತಿದ್ದ ವೇಳೆ ಚಾಲಕ ರಸ್ತೆ ತಪ್ಪಿಸಿಕೊಂಡು ಮುಂದೆ ಹೋಗಿದ್ದಾನೆ. ಬಳಿಕ ಸೆಂಟರ್ ಲೈನ್ ಬಳಿ ಸಡನ್ ಆಗಿ ತಿರುಗಿದಾಗ ಲಾರಿ ಡಿಕ್ಕಿಯಾದಿರಬಹುದು. ಲಾರಿ ವೇಗ ಹೆಚ್ಚಿದ್ದ ಕಾರಣ ಅಪಘಾತದ ತೀವ್ರತೆ ಹೆಚ್ಚಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories