ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಕಟ್ಟುನಿಟ್ಟಿನ ನಿಯಮ! ಉಲ್ಲಂಘಿಸಿದರೆ ಕಠಿಣ ಕ್ರಮ
ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸರು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದು, ಅನುಮತಿ, ಮೆರವಣಿಗೆ ಮಾರ್ಗ, ಸಮಯ ಹಾಗೂ ಸ್ವಯಂಸೇವಕರ ಪಟ್ಟಿಗೆ ಸಂಬಂಧಿಸಿದ ನಿಯಮ ಪಾಲನೆ ಕಡ್ಡಾಯವಾಗಿದೆ.

ಬೆಂಗಳೂರಿನಲ್ಲಿ (Bengaluru) ಗಣೇಶ ಹಬ್ಬದ (Ganesh Festival) ಆಚರಣೆಗೆ ಈ ಬಾರಿ ಪೊಲೀಸರು ಕಟ್ಟುನಿಟ್ಟಿನ ನಿಯಮಗಳನ್ನು (Rules) ಜಾರಿಗೊಳಿಸಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಅನುಮತಿ ಇಲ್ಲದೆ ಗಣೇಶ ಮೂರ್ತಿ ಕೂರಿಸಲು ಅವಕಾಶ ಇರುವುದಿಲ್ಲ. ಆಯೋಜಕರು ನಿಯಮಾನುಸಾರವೇ ಕಾರ್ಯಕ್ರಮ ನಡೆಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ತಿಳಿಸಿದ್ದಾರೆ.
ಗಣೇಶೋತ್ಸವ ಆಚರಣೆಯ ಸಂಪೂರ್ಣ ಜವಾಬ್ದಾರಿ ಆಯೋಜಕರ ಮೇಲೆಯೇ ಇರಲಿದೆ. ಪೊಲೀಸರು ಹಾಗೂ ಜಿಬಿಎ (GBA) ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಸುಪ್ರೀಂಕೋರ್ಟ್ (Supreme Court) ನೀಡಿರುವ ಆದೇಶಗಳನ್ನೂ ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಗಣೇಶ ಮೆರವಣಿಗೆಗೆ (Procession) ನಿಗದಿಪಡಿಸಿರುವ ಮಾರ್ಗವನ್ನೇ ಬಳಸಬೇಕು. ಅಲ್ಲದೆ, ಅನುಮತಿಸಲಾದ ಸಮಯದೊಳಗೆ ಮೆರವಣಿಗೆ ಪೂರ್ಣಗೊಳಿಸುವಂತೆ ಆಯೋಜಕರು ನೋಡಿಕೊಳ್ಳಬೇಕು. ಮೆರವಣಿಗೆ ವೇಳೆ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿಯೂ ಆಯೋಜಕರ ಮೇಲಿದೆ.
ಇನ್ನು ಗಣೇಶೋತ್ಸವ ಹಾಗೂ ಮೆರವಣಿಗೆಯ ವೇಳೆ ಕರ್ತವ್ಯ ನಿರ್ವಹಿಸುವ ಸ್ವಯಂಸೇವಕರ (Volunteers) ಸಂಪೂರ್ಣ ಪಟ್ಟಿಯನ್ನು ಪೊಲೀಸರಿಗೆ ಮುಂಚಿತವಾಗಿ ನೀಡಬೇಕು. ಇದರಿಂದ ಕಾರ್ಯಕ್ರಮದ ವೇಳೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಪೊಲೀಸರಿಗೆ ಅನುಕೂಲವಾಗಲಿದೆ.
ಮೆರವಣಿಗೆ ಸಾಗುವ ಮಾರ್ಗ ಹಾಗೂ ಗಣೇಶ ವಿಸರ್ಜನೆ (Immersion) ನಡೆಯುವ ಸ್ಥಳಗಳಲ್ಲಿ ಜಿಬಿಎ ಮತ್ತು ಆಯಾ ವಿಭಾಗಗಳ ಡಿಸಿಪಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಸ್ಥಳದಲ್ಲಿನ ವ್ಯವಸ್ಥೆಗಳು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಗಮನಹರಿಸಲಿದ್ದಾರೆ.
ನಿಯಮಗಳನ್ನು ಪಾಲಿಸುವ ಮೂಲಕ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.



