Bengaluru Towing: ಬೆಂಗಳೂರು ಟೋಯಿಂಗ್ ಮತ್ತೆ ಜಾರಿಗೆ ಸಿದ್ಧತೆ! ಇನ್ಮುಂದೆ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವಂತಿಲ್ಲ
ಬೆಂಗಳೂರಿನಲ್ಲಿ ಅನಧಿಕೃತ ಪಾರ್ಕಿಂಗ್ ನಿಯಂತ್ರಣಕ್ಕೆ ಮತ್ತೆ ಟೋಯಿಂಗ್ ಜಾರಿ ಮಾಡಲು ಸಂಚಾರ ಪೊಲೀಸ್ ಹಾಗೂ ಬಿಬಿಎಂಪಿ ಮುಂದಾಗಿದ್ದು ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

- ಬೆಂಗಳೂರು ಟೋಯಿಂಗ್ ಮತ್ತೆ ಜಾರಿಗೆ ಸಿದ್ಧತೆ
- ಅನಧಿಕೃತ ಪಾರ್ಕಿಂಗ್ ಸುಗಮ ಸಂಚಾರಕ್ಕೆ ಅಡ್ಡಿ
- ಟ್ರಾಫಿಕ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ
Bengaluru Towing: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರೊಂದಿಗೆ ಟ್ರಾಫಿಕ್ ಸಮಸ್ಯೆಯೂ ತೀವ್ರವಾಗುತ್ತಿದೆ. ಈ ನಡುವೆ ಬೇಕಾಬಿಟ್ಟಿ ಅನಧಿಕೃತ ಪಾರ್ಕಿಂಗ್ಗಳು ನಗರ ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಗಿವೆ.
ಪ್ರಮುಖ ರಸ್ತೆಗಳು, ವಸತಿ ಪ್ರದೇಶಗಳು ಹಾಗೂ ಸಣ್ಣ ಲೇನ್ಗಳು ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸ್ಥಿತಿಯನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.
ವರ್ಷಾನುಗಟ್ಟಲೆ ರಸ್ತೆ ಮೇಲೆ ನಿಂತ ವಾಹನಗಳು
ನಗರದ ಹಲವು ಭಾಗಗಳಲ್ಲಿ ನಿಲ್ಲಿಸಿದ ವಾಹನಗಳು ವರ್ಷಗಳಾದರೂ ಕದಲದೇ ರಸ್ತೆಯ ಮೇಲೆಯೇ ಉಳಿದಿವೆ. ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆ, ಶಿವನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಪಾರ್ಕಿಂಗ್ ಜಾಗಗಳಾಗಿ ಮಾರ್ಪಟ್ಟಿವೆ. ಕೆಲವು ವಾಹನಗಳ ಮೇಲೆ ಧೂಳು, ತುಕ್ಕು ಹಿಡಿದಿದ್ದರೂ ಮಾಲೀಕರು ಇತ್ತ ತಿರುಗಿ ನೋಡಿಲ್ಲ.
ಇಂತಹ ಸ್ಥಿತಿಯಿಂದ ರಸ್ತೆ ಅಗಲ ಕಡಿಮೆಯಾಗಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ವಸತಿ ಪ್ರದೇಶಗಳಿಗೂ ಪಾರ್ಕಿಂಗ್ ಕಾಟ
ಮಲ್ಲೇಶ್ವರಂ 8ನೇ ಮುಖ್ಯರಸ್ತೆ ಸೇರಿದಂತೆ ಹಲವು ವಸತಿ ಪ್ರದೇಶಗಳು ಅನಾಮಿಕ ವಾಹನಗಳ ಶಾಶ್ವತ ಪಾರ್ಕಿಂಗ್ ಸ್ಥಳಗಳಾಗಿವೆ. 2019ರಲ್ಲಿ ನಿಲ್ಲಿಸಲಾದ ಕೆಲ ವಾಹನಗಳು ಇಂದಿಗೂ ಅಲ್ಲಿಯೇ ನಿಂತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಕ್ರಾಪ್ ಆಗಬೇಕಾದ ವಾಹನಗಳೂ ರಸ್ತೆಯ ಮೇಲೆ ಉಳಿದಿವೆ ಎಂಬ ಆರೋಪ ಕೇಳಿಬರುತ್ತಿದೆ.
ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂಬುದು ಅವರ ಬೇಸರ.
ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ಟಾಪ್ ಲಿಸ್ಟ್
ಇತ್ತೀಚೆಗೆ ಜಾಗತಿಕ ಮಟ್ಟದಲ್ಲೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಚರ್ಚೆಗೆ ಗ್ರಾಸವಾಗಿತ್ತು. ನೆದರ್ಲೆಂಡ್ಸ್ ಮೂಲದ ಟಾಮ್ಟಾಮ್ ಸಂಸ್ಥೆಯ 2025ರ ಸಂಚಾರ ಸೂಚ್ಯಂಕ ವರದಿಯಲ್ಲಿ, ಟ್ರಾಫಿಕ್ ದಟ್ಟಣೆಯಲ್ಲಿ ಬೆಂಗಳೂರು ವಿಶ್ವದ ಟಾಪ್ 2 ನಗರಗಳ ಪಟ್ಟಿಗೆ ಸೇರಿದೆ. 2025ರಲ್ಲಿ ನಗರದ ಸರಾಸರಿ ಸಂಚಾರ ದಟ್ಟಣೆ ಶೇ.74.4ಕ್ಕೆ ಏರಿಕೆಯಾಗಿದೆ.
ಈ ಹಿನ್ನೆಲೆ ನೋಡಿದರೆ, ಅನಧಿಕೃತ ಪಾರ್ಕಿಂಗ್ ವಿರುದ್ಧ ಕಠಿಣ ಕ್ರಮ ಅವಶ್ಯಕ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಸಾರ್ವಜನಿಕರಿಗೆ ಎಚ್ಚರಿಕೆ
ಇನ್ನುಮುಂದೆ ನಿಷೇಧಿತ ಪ್ರದೇಶಗಳಲ್ಲಿ ಅಥವಾ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದರೆ ವಾಹನ ಟೋಯಿಂಗ್ ಆಗುವುದು ಖಚಿತ. ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ವಾಹನ ಎತ್ತಿಸುವ ವೆಚ್ಚವೂ ಭರಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ.



