ಬೆಂಗಳೂರು ರಸ್ತೆಗಳಲ್ಲಿ ಸಂಚಾರ ವ್ಯತ್ಯಯ: ಕೆಲ ಮಾರ್ಗಗಳು ತಾತ್ಕಾಲಿಕ ಬಂದ್
ಬೆಂಗಳೂರು ನಗರದ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆ ಸಂಚಾರ ವ್ಯತ್ಯಯ ಉಂಟಾಗಲಿದೆ. ವಾಹನ ಸವಾರರು ಬದಲಿ ಮಾರ್ಗ ಬಳಸುವಂತೆ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಎಂ.ಜಿ. ರಸ್ತೆಯಲ್ಲಿ ಮರು ಡಾಂಬರೀಕರಣ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಟ್ರಿನಿಟಿ ಸರ್ಕಲ್‌ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವೃತ್ತದವರೆಗೆ ಸುಮಾರು 2.2 ಕಿಲೋಮೀಟರ್ ಉದ್ದದ ರಸ್ತೆಯನ್ನು ಮೊದಲ ಹಂತದಲ್ಲಿ ಮರು ಡಾಂಬರೀಕರಣ ಮಾಡಲಾಗುತ್ತದೆ.
ಮಾಹಿತಿಯ ಪ್ರಕಾರ, ಪೂರ್ವಸಿದ್ಧತಾ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯ ಕಾಮಗಾರಿ ಆರಂಭವಾಗಲಿದೆ. ಟ್ರಾಫಿಕ್ ಪೊಲೀಸ್ ಅನುಮತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಸ್ತೆ ಕಾಮಗಾರಿ ವೇಗ ಪಡೆಯಲಿದೆ. ಸುಮಾರು 15 ದಿನಗಳೊಳಗೆ ಈ ಕೆಲಸಗಳನ್ನು ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ವೈಟ್ ಟಾಪಿಂಗ್ ಯೋಜನೆ ಕೈಬಿಟ್ಟ ಕಾರಣ
ಎಂ.ಜಿ. ರಸ್ತೆಯಲ್ಲಿ ಮೊದಲು ವೈಟ್ ಟಾಪಿಂಗ್ ಮಾಡುವ ಯೋಚನೆ ಇದ್ದರೂ, ಅದಕ್ಕಾಗಿ ದೀರ್ಘಕಾಲ ರಸ್ತೆ ಬಂದ್ ಮಾಡಬೇಕಾಗುವ ಸಾಧ್ಯತೆ ಇದ್ದ ಕಾರಣ ಟ್ರಾಫಿಕ್ ಪೊಲೀಸರು ಅನುಮತಿ ನೀಡಲಿಲ್ಲ. ಇದರಿಂದಾಗಿ ಮರು ಡಾಂಬರೀಕರಣವೇ ಉತ್ತಮ ಪರಿಹಾರವೆಂದು ತೀರ್ಮಾನಿಸಲಾಗಿದೆ.
ಈ ಕಾಮಗಾರಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಡೆಯುತ್ತಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾದ ಸುಮಾರು 25 ಕೋಟಿ ರೂಪಾಯಿ ಅನುದಾನದಲ್ಲಿ ಎಂ.ಜಿ. ರಸ್ತೆ ಸೇರಿದಂತೆ ಏಳು ಪ್ರಮುಖ ರಸ್ತೆಗಳ ಸುಧಾರಣೆ ಕಾರ್ಯಗಳು ಕೈಗೆತ್ತಿಕೊಳ್ಳಲಾಗಿದೆ.
ಬೆಂಗಳೂರು ವಿವಿ ರಸ್ತೆ ತಾತ್ಕಾಲಿಕ ಬಂದ್
ಇನ್ನೊಂದೆಡೆ, ರೈಲ್ವೆ ಸೇತುವೆಯ ಸ್ಟೀಲ್ ಗರ್ಡರ್ ಬದಲಾವಣೆ ಕೆಲಸದ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಿಂದ ಜ್ಞಾನಭಾರತಿ ಕ್ಯಾಂಪಸ್ ಕಡೆಗೆ ಸಾಗುವ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆ ತಾತ್ಕಾಲಿಕವಾಗಿ ಬಂದ್ ಆಗಲಿದೆ.
ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆಯವರೆಗೆ ಈ ರಸ್ತೆ ಮುಚ್ಚಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಆ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ತಮ್ಮ ಪ್ರಯಾಣ ಯೋಜನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ವಾಹನಗಳಿಗೆ ಬದಲಿ ಮಾರ್ಗಗಳು
ಮೈಸೂರು ರಸ್ತೆಯಿಂದ ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಉಳ್ಳಾಲ ರಿಂಗ್ ರೋಡ್ ಕಡೆಗೆ ಹೋಗುವ ವಾಹನಗಳು ಜ್ಞಾನಭಾರತಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಜೈರಾಮದಾಸ್ ಜಂಕ್ಷನ್, ಮುತ್ತುರಾಯನಗರ ಹಾಗೂ ಗವರ್‍ನ್ಮೆಂಟ್ ಪ್ರೆಸ್ ರಸ್ತೆ ಮೂಲಕ ಸಾಗಬಹುದು. ನಂತರ ಬಿಪಿಇಡ್ ಮೈದಾನದ ಬಳಿ ಬಲಕ್ಕೆ ತಿರುಗಿ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆಗೆ ಸೇರುವ ಅವಕಾಶ ಇದೆ.
ಉಳ್ಳಾಲ ಜಂಕ್ಷನ್‌ನಿಂದ ಜ್ಞಾನಭಾರತಿ ಜಂಕ್ಷನ್ ಮತ್ತು ಮೈಸೂರು ರಸ್ತೆಗೆ ಹೋಗುವ ವಾಹನಗಳು ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ಕಚೇರಿ ವೃತ್ತದ ಬಳಿ ಎಡಕ್ಕೆ ತಿರುಗಿ ನಾಗರಭಾವಿ ಮುಖ್ಯ ರಸ್ತೆ ಮೂಲಕ ರಿಂಗ್ ರೋಡ್ ಮಾರ್ಗವಾಗಿ ಮೈಸೂರು ರಸ್ತೆಗೆ ತೆರಳಬೇಕು.
ಮರಿಯಪ್ಪನಪಾಳ್ಯ ಜಂಕ್ಷನ್‌ನಿಂದ ಪ್ರಯಾಣಿಸುವ ವಾಹನಗಳು ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುಗಿ, ನಂತರ ಮುಖ್ಯ ಕಚೇರಿ ವೃತ್ತದ ಬಳಿ ಬಲಕ್ಕೆ ತಿರುಗಿ ನಾಗರಭಾವಿ ಮುಖ್ಯ ರಸ್ತೆ ಹಾಗೂ ರಿಂಗ್ ರೋಡ್ ಮೂಲಕ ಮೈಸೂರು ರಸ್ತೆಗೆ ಹೋಗಬಹುದು.
ನಗರದ ಈ ಭಾಗಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುಂಚಿತವಾಗಿ ಮಾರ್ಗ ಬದಲಾವಣೆ ಗಮನಿಸಿ ಪ್ರಯಾಣಿಸುವುದು ಸೂಕ್ತ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.



