ಬೆಂಗಳೂರು ಟ್ರಾಫಿಕ್ ಅಲರ್ಟ್: ಕೆಂಪೇಗೌಡ ಜಯಂತಿಗೆ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಗೇರಿ ಸಮೀಪ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೂನ್ 27ರಂದು ಬೆಳಗ್ಗೆಯಿಂದ ಸಂಜೆವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳನ್ನು ಬೆಂಗಳೂರು ಪೊಲೀಸರು ಪ್ರಕಟಿಸಿದ್ದಾರೆ.

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರ್ಕಾರ ಈ ಬಾರಿ ರಾಜ್ಯಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಜೂನ್ 27ರಂದು ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯ ನೂತನ ಕೆಂಪೇಗೌಡ ಬಡಾವಣೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಸುಮಾರು 40ರಿಂದ 50 ಸಾವಿರ ಜನರು ಸೇರುವ ನಿರೀಕ್ಷೆಯಿರುವ ಕಾರಣ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮೈಸೂರು ರಸ್ತೆಯ ಮಾರಿಗೋಲ್ಡ್ ಶಾಲೆ ಜಂಕ್ಷನ್‌ನಿಂದ ಭೀಮನಕುಪ್ಪೆ ಜಂಕ್ಷನ್‌ವರೆಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಜಾರಿಯಲ್ಲಿರಲಿದೆ. ಈ ವಾಹನಗಳು ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಮೂಲಕ ನೈಸ್ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.
ಅದೇ ರೀತಿ ಕೊಮ್ಮಘಟ್ಟ ಜಂಕ್ಷನ್‌ನಿಂದ ಹೊಸಕೆರೆ ಗ್ರಾಮದ ಜಂಕ್ಷನ್‌ವರೆಗೆ ಎಲ್ಲಾ ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ವಿಶ್ವೇಶ್ವರಯ್ಯ ಲೇಔಟ್ ರಿಂಗ್ ರಸ್ತೆ ಹಾಗೂ ಉಲ್ಲಾಳು ಮೂಲಕ ಮಾಗಡಿ ರಸ್ತೆಯನ್ನು ಬಳಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಮೈಸೂರು ರಸ್ತೆಯ ಮಧು ಜಂಕ್ಷನ್‌ನಿಂದ ಕುಂಬಳಗೋಡು ಜಂಕ್ಷನ್, ನೈಸ್ ರಸ್ತೆಯ ಸೋಂಪುರ ಟೋಲ್‌ನಿಂದ ಮಾಗಡಿ ರಸ್ತೆ ಜಂಕ್ಷನ್, ಚಲ್ಲಘಟ್ಟ ಮುಖ್ಯರಸ್ತೆ ಹಾಗೂ ಕೆಂಗೇರಿ ಉಪನಗರದ ರೈನ್‌ಬೋ ಬ್ರಿಡ್ಜ್‌ನಿಂದ ಕೊಮ್ಮಘಟ್ಟದವರೆಗೆ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗಗಳಲ್ಲಿ ನಿಧಾನಗತಿಯ ಸಂಚಾರ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ರಾಜ್ಯ ಸರ್ಕಾರವು ಈ ಬಾರಿ ವಿಧಾನಸಭೆಯ ಎಲ್ಲಾ 224 ಕ್ಷೇತ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ತಲಾ ₹1 ಲಕ್ಷ ಹಾಗೂ ಬೆಂಗಳೂರಿನ 369 ವಾರ್ಡ್‌ಗಳಲ್ಲಿಯೂ ತಲಾ ₹1 ಲಕ್ಷ ಅನುದಾನ ನೀಡಲು ನಿರ್ಧರಿಸಿದ್ದು, ರಾಜ್ಯಾದ್ಯಂತ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.



