ಬೆಂಗಳೂರಿನಲ್ಲಿ ಮಹಾ ಕುಂಭಮೇಳ ಪ್ರವಾಸದ ಹೆಸರಿನಲ್ಲಿ ವಂಚನೆ!
ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗುವ ಪ್ರವಾಸದ ಸುಲಭ ಪ್ಯಾಕೇಜ್ ಎಂದು ನಂಬಿಸಿ ಜನರನ್ನು ಮೋಸಗೊಳಿಸುತ್ತಿದ್ದಾರೆ.
- ಕುಂಭಮೇಳ ಪ್ರವಾಸ ಪ್ಯಾಕೇಜ್‌ನ ಹೆಸರಿನಲ್ಲಿ ವಂಚನೆ
- ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ಹಣ ದೋಚಿದ ವಂಚಕರು
- 64 ಸಾವಿರ ರೂ. ಕಳೆದುಕೊಂಡ ವ್ಯಕ್ತಿಯಿಂದ ದೂರು ದಾಖಲು
ಬೆಂಗಳೂರು (Bengaluru): ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Maha Kumbh Mela) ಪಾಲ್ಗೊಳ್ಳುವುದು ಹಲವರ ಕನಸು. ಆದರೆ, ಈ ಕನಸು ಸಾಕಾರ ಮಾಡುವ ಹೆಸರಿನಲ್ಲಿ ವಂಚಕರು ತಮ್ಮ ದಂಧೆ ಮುಂದುವರಿಸುತ್ತಿದ್ದಾರೆ. ಸುಲಭ ಪ್ರವಾಸದ ಪ್ಯಾಕೇಜ್ (Tour Package) ನೀಡುವುದಾಗಿ ನಂಬಿಸಿ ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಡಿಎ ಲೇಔಟ್ ನಿವಾಸಿ ಪ್ರದೀಪ್ ಕುಂಭಮೇಳಕ್ಕೆ ಹೋಗಲು ಬಯಸಿದ್ದರು. ಪ್ರವಾಸದ ವ್ಯವಸ್ಥೆಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿದಾಗ, ತಮ್ಮನ್ನು ಟ್ರಾವೆಲ್ ಏಜೆಂಟ್ ಎಂದು ಹೇಳಿಕೊಂಡ ಕೆಲವು ಜನರು ಸಂಪರ್ಕಿಸಿದರು.
‘ನೀವು ಕಡಿಮೆ ವೆಚ್ಚದಲ್ಲಿ ಪ್ರಯಾಗ್ ರಾಜ್‌ಗೆ ಹೋಗಬಹುದು’ ಎಂದು ಭರವಸೆ ನೀಡಿದ ಅವರು, ಪ್ರಯಾಣದ ಪ್ಯಾಕೇಜ್ ವಿವರಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದರು.
ನಂಬಿದ ಪ್ರದೀಪ್, ಹಂತ ಹಂತವಾಗಿ 64 ಸಾವಿರ ರೂ.ಗಳನ್ನು ಮುಂಗಡ ಪಾವತಿ ಮಾಡಿದ್ದಾರೆ. ಆದರೆ, ಹಣ ಪಾವತಿ ಆದ ನಂತರ ಏಜೆಂಟ್‌ಗಳು ಸಂಪರ್ಕಕ್ಕೆ ಸಿಗದೆ ವಂಚಿಸಿದ್ದಾರೆ. ವಂಚನೆಯ ಬಗ್ಗೆ ಅರಿತ ಕೂಡಲೇ ಅವರು ಸೈಬರ್ ಕ್ರೈಮ್ ಸಹಾಯವಾಣಿಗೆ ದೂರು ನೀಡಿದ್ದಾರೆ. ನಂತರ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಪ್ರಕರಣ ಪ್ರಯಾಣಿಕರಿಗೆ ಎಚ್ಚರಿಕೆಯ ಕರೆ. ಕುಂಭಮೇಳ ಅಥವಾ ಇತರ ಯಾವುದೇ ಧಾರ್ಮಿಕ ಪ್ರವಾಸಕ್ಕೆ ಪ್ಯಾಕೇಜ್ ಆಯ್ಕೆ ಮಾಡುವ ಮುನ್ನ ಸರಿಯಾಗಿ ಪರಿಶೀಲನೆ ಮಾಡುವುದು ಅತ್ಯಗತ್ಯ.
Travel Scam in the Name of Kumbh Mela in Bengaluru